ಶಿಮ್ಲಾ (ಆ.4): ಹಿಮಾಚಲ ಪ್ರದೇಶದ ರಾಜಧಾನಿ ಶಿಮ್ಲಾದ ಬಳಿ ರಾಷ್ಟ್ರೀಯ ಹೆದ್ದಾರಿ-5 ರಲ್ಲಿ ಭೀಕರ ಅಪಘಾತ ಸಂಭವಿಸಿದ್ದು, ಮಳೆಗಾಲದ ಭೂಕುಸಿತದ ಅವಶೇಷಗಳನ್ನು ತೆರವುಗೊಳಿಸುತ್ತಿದ್ದ ಜೆಸಿಬಿ ಯಂತ್ರ 300 ಮೀಟರ್‌ಗಿಂತ ಹೆಚ್ಚು ಆಳದ ಕಂದಕಕ್ಕೆ ಜಾರಿ ಬಿದ್ದ ಪರಿಣಾಮ, ಚಾಲಕ ಸ್ಥಳದಲ್ಲೇ ಮೃತಪಟ್ಟಿರುವ ದುರ್ಘಟನೆ ನಡೆದಿದೆ.
ಈ ಘಟನೆ ಶಿಮ್ಲಾ ಜಿಲ್ಲೆಯ ಕುಮಾರ್‌ಸೈನ್‌ನ ಶಾನಂದ್ ಸಮೀಪ ಸಂಭವಿಸಿದ್ದು, ಇತ್ತೀಚಿನ ಭಾರೀ ಮಳೆಯಿಂದಾಗಿ ಗುಡ್ಡಗಾಡು ರಸ್ತೆಯಲ್ಲಿ ಮಣ್ಣು ಹಾಗೂ ಕಲ್ಲುಗಳು ಬೀಳುತ್ತಿದ್ದವು. ಈ ನಡುವೆ ರಸ್ತೆಯಲ್ಲಿ ಸಂಚಾರವನ್ನು ಸುಗಮಗೊಳಿಸಲು ಜೆಸಿಬಿ ಮೂಲಕ ತೆರವು ಕಾರ್ಯ ನಡೆಯುತ್ತಿದ್ದಾಗ, ಇದ್ದಕ್ಕಿದ್ದಂತೆ ಮತ್ತೊಂದು ಭೂಕುಸಿತ ಸಂಭವಿಸಿತು. ಪರಿಣಾಮ, ನಿಯಂತ್ರಣ ತಪ್ಪಿದ ಜೆಸಿಬಿ ವಾಹನ ಚಾಲಕನೊಂದಿಗೆ ಕಂದಕಕ್ಕೆ ಬಿದ್ದುದು ಕ್ಯಾಮೆರಾದಲ್ಲಿ ಸೆರೆಯಾಗಿದೆ.
ಘಟನೆಯಲ್ಲಿ ಗಂಭೀರವಾಗಿ ಗಾಯಗೊಂಡಿದ್ದ ಜೆಸಿಬಿ ಚಾಲಕ ದಿನೇಶ್ ಕುಮಾರ್ ಅವರನ್ನು ತಕ್ಷಣ ಸ್ಥಳೀಯ ಆಸ್ಪತ್ರೆಗೆ ಸಾಗಿಸಲಾಯಿತು. ಆದರೆ ಚಿಕಿತ್ಸೆ ಫಲಕಾರಿಯಾಗದೇ ಅವರು ಮೃತಪಟ್ಟಿದ್ದಾರೆ. ಮೃತ ದಿನೇಶ್ ಮಂಡಿ ಜಿಲ್ಲೆಯ ನಿವಾಸಿಯಾಗಿದ್ದಾರೆ.
ಸಹಾಯಕ ಸಿಬ್ಬಂದಿ ಮತ್ತು ಸ್ಥಳೀಯರು ಇನ್ನೂ ಕೂಡ ಅಪಘಾತ ಸ್ಥಳದಲ್ಲಿ ಶೋಧ ಕಾರ್ಯಾಚರಣೆಯಲ್ಲಿ ತೊಡಗಿದ್ದಾರೆ. ಹಿಮಾಚಲ ಪ್ರದೇಶದಲ್ಲಿ ನಿರಂತರವಾಗಿ ಸುರಿಯುತ್ತಿರುವ ಭಾರೀ ಮಳೆ ಸಾಕಷ್ಟು ಪ್ರದೇಶಗಳಲ್ಲಿ ಭೂಕುಸಿತ, ರಸ್ತೆ ಅಡ್ಡಿಪಡಿಕೆ ಹಾಗೂ ಜೀವ ಹಾನಿ ಉಂಟುಮಾಡುತ್ತಿದೆ.














