ಬೆಳ್ತಂಗಡಿ:ಆ.13 ರಂದು ಬೆಳಿಗ್ಗೆ, ನಕಲಿ ನಂಬರ್ ಪ್ಲೇಟ್ (KA 19 MP 2084) ಅಳವಡಿಸಿಕೊಂಡಿದ್ದ ಇನ್ನೋವಾ ಕಾರಿನಲ್ಲಿ ಮೂರು ದನಗಳನ್ನು ಹಿಂಸಾತ್ಮಕವಾಗಿ ತುಂಬಿಸಿಕೊಂಡು, ಚಿಕ್ಕಮಗಳೂರಿನ ಮುಡಗೇರಿ ಪ್ರದೇಶದಿಂದ ಮಂಗಳೂರು ಕಡೆಗೆ ಚಾರ್ಮಾಡಿ ಮಾರ್ಗವಾಗಿ ಅತೀವೇಗ ಹಾಗೂ ದುಡುಕುತನದಲ್ಲಿ ಚಲಾಯಿಸಿದ ಘಟನೆ ನಡೆದಿದೆ.
ಮಾಹಿತಿ ಪಡೆದ ಬೆಳ್ತಂಗಡಿ ಠಾಣಾ ಪೊಲೀಸರು ಗುರುವಾಯನಕೆರೆ ಬಳಿ ವಾಹನವನ್ನು ನಿಲ್ಲಿಸಲು ಸೂಚಿಸಿದರೂ, ಚಾಲಕ ವಾಹನ ನಿಲ್ಲಿಸದೇ ಪರಾರಿಯಾಗಲು ಯತ್ನಿಸಿದ್ದು, ಈ ವೇಳೆ ಒಂದು ಅಟೋ ರಿಕ್ಷಾ ಹಾಗೂ ವಿದ್ಯುತ್ ಕಂಬಕ್ಕೆ ಡಿಕ್ಕಿ ಹೊಡೆದು ನಿಂತಿದೆ.
ಪೊಲೀಸರ ಕರ್ತವ್ಯಕ್ಕೆ ಅಡ್ಡಿಪಡಿಸಿ ಪರಾರಿಯಾಗಲು ಯತ್ನಿಸಿದ ಮೂವರಲ್ಲಿ ಇಬ್ಬರು ತಪ್ಪಿಸಿಕೊಂಡಿದ್ದು, ಚಾಲಕನಾದ ಮೂಡಬಿದ್ರೆ ಸುವರ್ಣನಗರದ ಆರಿಫ್ (26) ಅವರನ್ನು ಸ್ಥಳದಲ್ಲೇ ವಶಕ್ಕೆ ಪಡೆದಿದ್ದಾರೆ.
ಪರಾರಿಯಾದವರು ಮೂಡಬಿದ್ರೆ ಸುವರ್ಣನಗರದ ರಜ್ವಾನ್ (30) ಮತ್ತು ಸಾಯಿಲ್ (22) ಎಂದು ಗುರುತಿಸಲಾಗಿದೆ. ಘಟನೆ ಕುರಿತು ಬೆಳ್ತಂಗಡಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಮುಂದಿನ ತನಿಖೆ ನಡೆಯುತ್ತಿದೆ.














