
ಮಂಗಳೂರು: ಭಾರಿ ಮಳೆಯಿಂದ ಶಿರಿಬಾಗಿಲು ಹಾಗೂ ಎಡಕುಮೇರಿ, ಎಡಕುಮೇರಿ-ಕಡಗರವಳ್ಳಿ, ಕಡಗರವಳ್ಳಿ-ದೋಣಿಗಾಲ್ ಭಾಗಗಳಲ್ಲಿ ಭೂಕುಸಿತ ಉಂಟಾಗಿ ರೈಲು ಸಂಚಾರದಲ್ಲಿ ವ್ಯತ್ಯಯ ಉಂಟಾಗಿದೆ.
ಶನಿವಾರ ಸಂಜೆ 4.40ಕ್ಕೆ ಸಂಭವಿಸಿದ ಭೂಕುಸಿತದ ಬಳಿಕ ಹಳಿ ಸಾಮಾನ್ಯ ಸ್ಥಿತಿಗೆ ತರಲು ಸಕಲೇಶಪುರದಿಂದ ವಿಶೇಷ ರೈಲು ಕಳುಹಿಸಲಾಗಿದೆ. ಇದರಿಂದ ಹಲವು ರೈಲುಗಳ ಸಂಚಾರಕ್ಕೆ ತೊಂದರೆ ಉಂಟಾಗಿದೆ.
ಮಂಗಳೂರಿನಿಂದ ಹೊರಟ ನಂ.07378 ಮಂಗಳೂರು ಸೆಂಟ್ರಲ್–ವಿಜಯಪುರ ಎಕ್ಸ್‌ಪ್ರೆಸ್ ರೈಲು ತೋಕೂರು–ಕಾರವಾರ–ಮಡಗಾಂವ್–ಲೋಂಡ–ಹುಬ್ಬಳ್ಳಿ ಮಾರ್ಗದ ಮೂಲಕ ಕಳುಹಿಸಲಾಗಿದೆ. ಬಂಟ್ವಾಳ, ಕಬಕಪುತ್ತೂರು, ಸುಬ್ರಹ್ಮಣ್ಯ ರೋಡ್, ಸಕಲೇಶಪುರ, ಹಾಸನ, ಅರಸಿಕೆರೆ, ಕಡೂರು, ಹಾವೇರಿ ಮಾರ್ಗದಲ್ಲಿ ಸಂಚಾರವಾಗಿಲ್ಲ.
ಅದೇ ರೀತಿ ನಂ.16586 ಮುರುಡೇಶ್ವರ–ಎಸ್‌ಎಂವಿಟಿ ಬೆಂಗಳೂರು ರೈಲು, ನಂ.16512 ಕಣ್ಣೂರು–ಬೆಂಗಳೂರು ಕೆಎಸ್‌ಆರ್ ಎಕ್ಸ್‌ಪ್ರೆಸ್ ಹಾಗೂ ನಂ.16596 ಕಾರವಾರ–ಬೆಂಗಳೂರು ರೈಲು ಕಾಸರಗೋಡು–ಶೋರ್ನೂರು–ಸೇಲಂ–ಜೋಳಾರ್‌ಪಟ್ಟಿ ಮಾರ್ಗದ ಮೂಲಕ ಸಂಚರಿಸಿವೆ.






