
ಪುತ್ತೂರು, ಆ.21:ಪುತ್ತೂರು ಉಪವಿಭಾಗ ಮಟ್ಟದ ಶಾಂತಿ ಸಭೆ ಗುರುವಾರ ಪುತ್ತೂರು ಟೌನ್ ಬ್ಯಾಂಕ್ ಸಭಾಂಗಣದಲ್ಲಿ ನಡೆಯಿತು. ಮುಂಬರುವ ಗಣೇಶ ಚತುರ್ಥಿ ಹಾಗೂ ಈದ್ ಮಿಲಾದ್ ಹಬ್ಬದ ಹಿನ್ನೆಲೆಯಲ್ಲಿ ಕರಾವಳಿಯ ಸೌಹಾರ್ದ ಪರಂಪರೆಯನ್ನು ಕಾಪಾಡಿ, ಎಲ್ಲರೂ ಒಂದಾಗಿ ಶಾಂತಿಯುತವಾಗಿ ಹಬ್ಬಗಳನ್ನು ಆಚರಿಸಬೇಕು ಎಂದು ಸಭೆಯಲ್ಲಿ ಒತ್ತಾಯಿಸಲಾಯಿತು.
ಸಭೆಯನ್ನು ಉದ್ದೇಶಿಸಿ ಮಾತನಾಡಿದ ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಅನಿಲ್ ಕುಮಾರ್ ಭೂಮಾರೆಡ್ಡಿ ಅವರು –
“ಪುತ್ತೂರಿನಲ್ಲಿ ಬಾಂಧವ್ಯ ತುಂಬಾ ಉತ್ತಮವಾಗಿದೆ. ತಲೆತಲಾಂತರದಿಂದ ನಡೆದು ಬರುತ್ತಿರುವ ಹಬ್ಬ-ಆಚರಣೆಗಳಿಗೆ ಪೊಲೀಸ್ ಇಲಾಖೆಯಿಂದ ಯಾವುದೇ ತೊಂದರೆ ಇಲ್ಲ. ಆದರೆ, ಎಲ್ಲ ವಯೋಮಾನದ ಜನರ ಭದ್ರತೆ ಹಾಗೂ ಸಮಾಜದಲ್ಲಿ ಶಾಂತಿ ಕಾಪಾಡುವ ದೃಷ್ಟಿಯಿಂದ ಕೆಲವು ನಿಯಮಗಳನ್ನು ಪಾಲಿಸಬೇಕಾಗಿದೆ. ಕಿಡಿಗೇಡಿಗಳಿಂದ ಉಂಟಾಗುವ ಉದ್ವಿಗ್ನತೆ ತಪ್ಪಿಸಲು ಕಾನೂನು ಸುವ್ಯವಸ್ಥೆಗೆ ಸಹಕಾರ ನೀಡಬೇಕು. ಹಬ್ಬದ ಸಂದರ್ಭದಲ್ಲಿ ಯಾವುದೇ ಕಿರಿಕಿರಿ ಉಂಟಾದರೆ ತಕ್ಷಣ ಸ್ಥಳೀಯ ಅಧಿಕಾರಿಗಳಿಗೆ ಅಥವಾ ಪೊಲೀಸರಿಗೆ ಮಾಹಿತಿ ನೀಡಬೇಕು” ಎಂದರು.
ಅವರು ಇನ್ನೂ ಮಾತನಾಡುತ್ತಾ –
“ಮೈಕ್ ಬಳಸುವ ನಿಬಂಧನೆಗಳು ಹೊಸದಲ್ಲ. ಶಬ್ದಮಾಲಿನ್ಯ ನಿಯಂತ್ರಣ ಮಂಡಳಿ 2000ರಲ್ಲೇ ಸಂಜೆ 6ರಿಂದ ರಾತ್ರಿ 10ರವರೆಗೆ ಮಾತ್ರ ಅನುಮತಿ ನೀಡುವಂತೆ ಆದೇಶ ಹೊರಡಿಸಿದೆ. ಆದ್ದರಿಂದ ಶೋಭಾಯಾತ್ರೆ ಹಾಗೂ ಸಾರ್ವಜನಿಕ ಕಾರ್ಯಕ್ರಮಗಳನ್ನು ಸಮಯಕ್ಕೆ ಮುಕ್ತಾಯಗೊಳಿಸುವುದು ಸೂಕ್ತ. ಆದರೆ ಮನೆ ಆವರಣದ ಒಳಗೆ ನಡೆಯುವ ಭಜನೆ-ಕೀರ್ತನೆಗಳಿಗೆ ಅಡ್ಡಿಯಿಲ್ಲ. ಸ್ವಯಂಸೇವಕರನ್ನು ನಿಯೋಜಿಸಿ, ಸಿಸಿಟಿವಿ ಅಳವಡಿಸಿ ಮುನ್ನೆಚ್ಚರಿಕಾ ಕ್ರಮ ಕೈಗೊಳ್ಳಬೇಕು” ಎಂದರು.
ಈ ಸಂದರ್ಭದಲ್ಲಿ ಚೌತಿ ಹಾಗೂ ಈದ್ ಮಿಲಾದ್ ಹಬ್ಬ ಒಟ್ಟಿಗೆ ಬಂದಿರುವುದು ಸಹೋದರತ್ವಕ್ಕೆ ದೇವರ ಸಂದೇಶ ಎಂದು ಅವರು ಅಭಿಪ್ರಾಯಪಟ್ಟರು.
—
ನಾಯಕರು-ಅಭಿಪ್ರಾಯಗಳು
ಎಸ್.ಡಿ.ಪಿ.ಐ. ಗ್ರಾಮಾಂತರ ಜಿಲ್ಲಾ ಕಾರ್ಯದರ್ಶಿ ಸಿದ್ದೀಕ್: “ಈದ್ ಮಿಲಾದ್ ದಿನಾಂಕ ಇನ್ನೂ ನಿಗದಿಯಾಗಿಲ್ಲ. ಆದರೆ ಮೆರವಣಿಗೆ, ಮಕ್ಕಳ ಸಾಂಸ್ಕೃತಿಕ ಸ್ಪರ್ಧೆ ಹಾಗೂ ಮಧ್ಯಾಹ್ನದ ಬಳಿಕ ಕಾರ್ಯಕ್ರಮಗಳಿವೆ. ಪುತ್ತೂರಿನಲ್ಲಿ ನಾವು ಯಾವಾಗಲೂ ಸೌಹಾರ್ದದಿಂದ ಹಬ್ಬಗಳನ್ನು ಆಚರಿಸುತ್ತಿದ್ದೇವೆ” ಎಂದರು.
ಕಾವು ಹೇಮನಾಥ ಶೆಟ್ಟಿ: “ಚೌತಿ ಪುತ್ತೂರಿನಲ್ಲಿ ವಿಜೃಂಭಣೆಯಿಂದ ಆಚರಿಸಲಾಗುತ್ತದೆ. 10 ಗಂಟೆಗೆ ಮೈಕ್ ಆಫ್ ಮಾಡಿದರೆ ಸಮಸ್ಯೆ ಉಂಟಾಗುತ್ತದೆ. ಆದರೆ ಡಿಜೆ ಸಂಸ್ಕೃತಿಗೆ ನಾವು ವಿರೋಧಿಗಳು. ಉಳಿದಂತೆ ಹಬ್ಬ ಹಿಂದಿನಂತೆ ನಡೆಯಬೇಕು” ಎಂದರು.
ನೇಮಿರಾಜ್ (ಕುಂಬ್ರ ಶ್ರೀರಾಮ ಭಜನಾ ಮಂದಿರ): “ನಮ್ಮಲ್ಲಿ ಮೂರು ದಿನ ಚೌತಿ ಕಾರ್ಯಕ್ರಮ. ಮಧ್ಯರಾತ್ರಿವರೆಗೂ ಸಾಂಸ್ಕೃತಿಕ ಕಾರ್ಯಕ್ರಮ ನಡೆಯುತ್ತವೆ. ಇದುವರೆಗೆ ಎಲ್ಲರ ಸಹಕಾರದಿಂದ ಉತ್ತಮ ರೀತಿಯಲ್ಲಿ ನಡೆದಿದೆ” ಎಂದರು.
ರಾಧಾಕೃಷ್ಣ (ಮಹಾಲಿಂಗೇಶ್ವರ ವಠಾರದ ಗಣೇಶೋತ್ಸವ ಸಮಿತಿ): “ಯಾವುದೇ ಅಹಿತಕರ ಘಟನೆ ಇಲ್ಲದೇ ಹಬ್ಬ ಯಶಸ್ವಿಯಾಗಿದೆ. ಡಿಜೆ ಇಲ್ಲ. ಆದರೆ ಟ್ಯಾಬ್ಲೋಗೆ ಕಡಿಮೆ ಡೆಸಿಬಲ್ ಮೈಕ್ ಬೇಕಾಗುತ್ತದೆ. ಸಂಚಾರ ದಟ್ಟಣೆ ನಿಯಂತ್ರಣಕ್ಕೂ ಕ್ರಮ ಕೈಗೊಳ್ಳಬೇಕು” ಎಂದರು.
ಅಶ್ರಫ್ ಕಲ್ಲೇಗ (ದ.ಕ. ಮುಸ್ಲಿಂ ಯುವಜನ ಪರಿಷತ್ ಅಧ್ಯಕ್ಷ): “ವಾಹನ ಜಾಥಾವನ್ನು ನಿಲ್ಲಿಸಿ, ಈಗ ಕಾಲ್ನಡಿಗೆ ಮೆರವಣಿಗೆ ಮಾಡುತ್ತಿದ್ದೇವೆ. ಉತ್ತಮ ರೀತಿಯಲ್ಲಿ ಕಾರ್ಯಕ್ರಮ ನಡೆಯುತ್ತಿದೆ. ಚೌತಿ ಕಾರ್ಯಕ್ರಮಕ್ಕೂ ಮಧ್ಯರಾತ್ರಿ 12-1ರವರೆಗೆ ಮೈಕ್ ಅನುಮತಿ ನೀಡಬೇಕು” ಎಂದರು.
—
ಸಭೆಯಲ್ಲಿ ಹಾಜರಿದ್ದವರು
ಪೊಲೀಸ್ ಉಪಾಧೀಕ್ಷಕ ಅರುಣ್ ನಾಗೇಗೌಡ, ತಾಪಂ ಇಓ ನವೀನ್ ಕುಮಾರ್ ಭಂಡಾರಿ, ನಗರಸಭೆ ಪೌರಾಯುಕ್ತೆ ವಿದ್ಯಾ ಎಸ್. ಕಾಳೆ, ಪೊಲೀಸ್ ನಿರೀಕ್ಷಕ ಜಾನ್ಸನ್ ಡಿಸೋಜಾ, ಮಹಿಳಾ ಠಾಣೆ ವೃತ್ತ ನಿರೀಕ್ಷಕ ಸುನೀಲ್ ಕುಮಾರ್, ವಿವಿಧ ದೇವಸ್ಥಾನ-ಸಮಿತಿ ಮತ್ತು ಸಂಘಟನೆಗಳ ಪ್ರತಿನಿಧಿಗಳು ಉಪಸ್ಥಿತರಿದ್ದರು.






