
ಕೇಂದ್ರ ಸಚಿವ (Union Minister) ಎಚ್.ಡಿ. ಕುಮಾರಸ್ವಾಮಿಯವರ (HD Kumaraswamy) ಆರೋಗ್ಯ (Health) ಚೆನ್ನಾಗಿದ್ದು, ಯಾರೂ ಆತಂಕ ಪಡಬೇಕಿಲ್ಲ. ಎಚ್‌ಡಿಕೆ ತಮ್ಮ ಕೊನೆ ಉಸಿರಿರುವವರೆಗೂ ಜನಸೇವೆಗೆ ಬದುಕನ್ನು ಮುಡಿಪಾಗಿಟ್ಟಿದ್ದಾರೆ ಎಂದು ನಿಖಿಲ್ ಕುಮಾರಸ್ವಾಮಿ (Nikhil Kumaraswamy) ತಿಳಿಸಿದರು.
ಕುಮಾರಸ್ವಾಮಿ ಅವರ ಆರೋಗ್ಯ ಹದಗೆಟ್ಟಿದಂತಿದೆ. ಯಾಕಂದ್ರೆ ಅವರ ಫೋಟೋವನ್ನು ನೋಡುತ್ತಿದ್ದರೆ ಕೈಗಳು ಸಣ್ಣದಾಗಿದ್ದು, ಮುಖದಲ್ಲಿ ಕಾಂತಿ ಕಾಣಿಸುತ್ತಿಲ್ಲ. ಈ ಸಂಬಂಧ ಸಾಮಾಜಿಕ ಜಾಲತಾಣಗಳಲ್ಲಿ ಕುಮಾರಸ್ವಾಮಿ ಆರೋಗ್ಯದ ಬಗ್ಗೆ ತೀವ್ರ ಚರ್ಚೆಗಳಾಗುತ್ತಿವೆ.
ಕುಮಾರಸ್ವಾಮಿ ಅನಾರೋಗ್ಯದ ಬಗ್ಗೆ ಸ್ವತಃ ಪುತ್ರ ನಿಖಿಲ್ ಕುಮಾರಸ್ವಾಮಿ ಪ್ರತಿಕ್ರಿಯಿಸಿದ್ದು, ಕುಮಾರಸ್ವಾಮಿ ಆರೋಗ್ಯ ಚೆನ್ನಾಗಿದೆ, ಯಾರೂ ಆತಂಕ ಪಡಬೇಕಿಲ್ಲ. ಕೊನೆ ಉಸಿರಿರುವವರೆಗೂ ಜನಸೇವೆಗೆ ಜೀವನ ಮುಡಿಪಿಟ್ಟಿದ್ದಾರೆ. ದೇವೇಗೌಡರು ಸಹ ರಾಜಕೀಯದಿಂದ ವಿಶ್ರಾಂತಿ ತೆಗೆದುಕೊಂಡಿಲ್ಲ. ದೇವೇಗೌಡರ ಕುಟುಂಬಕ್ಕೆ ಜನರೇ ರಾಜಕೀಯ ಶಕ್ತಿ ತುಂಬಿದ್ದಾರೆ. ಅದನ್ನ ಜನರಿಗೆ ವಾಪಸ್ ಧಾರೆ ಎರೆಯುವ ಕೆಲಸ ಮಾಡಬೇಕಿದೆ ಎಂದರು.
ಎಚ್ಡಿಕೆ ಅವರ ಆರೋಗ್ಯದಲ್ಲಿ ಸಣ್ಣಪುಟ್ಟ ಏರುಪೇರಾಗಿದ್ದು ಸತ್ಯ. ಆದರೆ ಈಗ ಆರೋಗ್ಯ ಚೇತರಿಕೆಯಾಗುತ್ತಿದೆ. ಇದರ ಮಧ್ಯೆ ಪ್ರತಿನಿತ್ಯ ಇಲಾಖೆಯ ಸಭೆಗಳನ್ನು ಮಾಡುತ್ತಿದ್ದಾರೆ ಎಂದು ಸ್ಪಷ್ಟಪಡಿಸಿದರು. ಈ ಮೂಲಕ ಕುಮಾರಸ್ವಾಮಿ ಆರೋಗ್ಯದಲ್ಲಿ ಏರುಪೇರಾಗಿರುವುದನ್ನು ಒಪ್ಪಿಕೊಂಡರು.
ಕುಮಾರಸ್ವಾಮಿ ಆರೋಗ್ಯದ ಬಗ್ಗೆ ಪ್ರತಾಪ್ ಸಿಂಹ ಹೇಳಿದ್ದೇನು?
ಮೊನ್ನೆ ತಾನೇ ಕುಮಾರಸ್ವಾಮಿಯವರನ್ನು ದೆಹಲಿಯಲ್ಲಿ ಭೇಟಿ ಮಾಡಿರುವ ಮಾಜಿ ಸಂಸದ ಪ್ರತಾಪ್ ಸಿಂಹ, ಕೆಲವೊಂದು ಮಹತ್ವದ ವಿಷಯಗಳನ್ನು ಹಂಚಿಕೊಂಡಿದ್ದಾರೆ. ಸಾರ್ವಜನಿಕರೊಬ್ಬರು ಕುಮಾರಸ್ವಾಮಿ ಅವರ ಆರೋಗ್ಯದ ಬಗ್ಗೆ ವಿಚಾರಿಸಿದ್ದು, ಇದಕ್ಕೆ ಪ್ರತಾಪ್ ಸಿಂಹ ರಿಯಾಕ್ಟ್ ಮಾಡಿದ್ದರು.
‘ಕೇಂದ್ರ ಸಚಿವರಾದ ಎಚ್.ಡಿ.ಕುಮಾರಣ್ಣ ಅವರನ್ನು ದೆಹಲಿಯಲ್ಲಿರುವ ಅವರ ನಿವಾಸದಲ್ಲಿ ಭೇಟಿಯಾಗಿದ್ದೆವು. ಕುಮಾರಣ್ಣ ಚಟುವಟಿಕೆಯಿಂದಿರುವುದು ದೊಡ್ಡ ಧೈರ್ಯ ಮತ್ತು ಬಲವಿದ್ದಂತೆ’ ಎಂದು ಪ್ರತಾಪ್ ಸಿಂಹ ಎಕ್ಸ್‌ನಲ್ಲಿ ಬರೆದುಕೊಂಡಿದ್ದರು. ಆ ಫೋಟೋವನ್ನು ನೋಡಿರುವ ಎಚ್.ಡಿ ಕುಮಾರಸ್ವಾಮಿಯವರ ಅಭಿಮಾನಿಗಳು ಯಾಕೋ ಕುಮಾರಣ್ಣನ ಆರೋಗ್ಯದಲ್ಲಿ ಏರುಪೇರಾದಂತೆ ಕಾಣಿಸುತ್ತಿದೆ ಎಂದು ಆತಂಕ ವ್ಯಕ್ತಪಡಿಸಿದ್ದಾರೆ. ಇದಕ್ಕೆ ರಿಯಾಕ್ಟ್ ಮಾಡಿರುವ ಪ್ರತಾಪ್ ಸಿಂಹ, ಕುಮಾರಸ್ವಾಮಿ ಅವರು ‘ಆರಾಮಾಗಿ ಇದ್ದಾರೆ. Dont worry’ ಎಂದಿದ್ದರು.
ಪುನರ್ಜನ್ಮ ಸಿಕ್ಕಿದೆ ಎಂದಿದ್ದ ಕುಮಾರಸ್ವಾಮಿ
2023ರಲ್ಲಿ ಕುಮಾರಸ್ವಾಮಿಯವರಿಗೆ ಅನಾರೋಗ್ಯ ಕಾಡಿತ್ತು. ಪಾರ್ಶ್ವವಾಯುಗೆ ತುತ್ತಾಗಿದ್ದ ಕುಮಾರಸ್ವಾಮಿ ಜಯನಗರದ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ಬಿಡುಗಡೆಯಾಗಿದ್ದರು. ಈ ವೇಳೆ ಸುದ್ದಿಗಾರರೊಂದಿಗೆ ಮಾತನಾಡಿದ್ದ ಅವರು, ‘ನನಗೆ ಪುನರ್ಜನ್ಮ ಸಿಕ್ಕಿದೆ. ದೇವರು, ವೈದ್ಯರು, ತಂದೆ ತಾಯಿಗಳ ಆಶೀರ್ವಾದವೇ ಇದಕ್ಕೆ ಕಾರಣ. ಗೋಲ್ಡನ್ ಅವರ್ನಲ್ಲಿ ಆಸ್ಪತ್ರೆಗೆ ದಾಖಲಾದ ಹಿನ್ನೆಲೆಯಲ್ಲಿ ನನಗೆ ಪುನರ್ಜನ್ಮ ಸಿಕ್ಕಿದೆ’ ಎಂದಿದ್ದರು.
ಎಚ್ಡಿಕೆ ಹೃದಯಕ್ಕೆ ಸ್ಟೆಂಟ್ ಅಳವಡಿಕೆ
ಕುಮಾರಸ್ವಾಮಿ 2024ರಲ್ಲಿ ಚೆನ್ನೈನಲ್ಲಿ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದರು. ಹೃದಯಕ್ಕೆ ಸಂಬಂಧಿಸಿ ಎರಡು ಬಾರಿ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದ ಅವರು ಮೂರನೇ ಬಾರಿಗೆ ಚಿಕಿತ್ಸೆ ಪಡೆದಿದ್ದರು. ಕುಮಾರಸ್ವಾಮಿಯವರ ರಕ್ತನಾಳದ ಮೂಲಕ ಸ್ಟೆಂಟ್ ಅಳವಡಿಕೆ ಮಾಡಲಾಗಿದ್ದು, ಆರೋಗ್ಯದ ಬಗ್ಗೆ ಕಾಳಜಿ ವಹಿಸಿ ಎಂದು ವೈದ್ಯರು ಸೂಚಿಸಿದ್ದರು.






