ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಭಾರತದಿಂದ ಆಮದು ಆಗುವ ವಸ್ತುಗಳ ಮೇಲಿನ ಸುಂಕವನ್ನು ಮತ್ತಷ್ಟು ಹೆಚ್ಚಿಸುವುದಾಗಿ ಘೋಷಿಸಿದ್ದಾರೆ. ಈಗಾಗಲೇ ಶೇ.25ರಷ್ಟು ಸುಂಕ ಜಾರಿಯಲ್ಲಿದ್ದು, ಅದನ್ನು ಶೇ.50ಕ್ಕೆ ಏರಿಸುವ ಯೋಜನೆ ಹೊರಬಿದ್ದಿದೆ.
ಈಗಾಗಲೇ ಜಾರಿಯಲ್ಲಿರುವ ಶೇ.25ರಷ್ಟು ಸುಂಕದಿಂದಲೇ ಅಮೆರಿಕದಲ್ಲಿರುವ ಭಾರತೀಯರಿಗೆ ಬೆಲೆ ಏರಿಕೆ ತೀವ್ರ ಹೊಡೆತ ನೀಡಿದೆ. ದಿನಬಳಕೆ ವಸ್ತುಗಳಿಂದ ಹಿಡಿದು ತಿಂಡಿಪದಾರ್ಥಗಳವರೆಗೆ ಎಲ್ಲದರ ಬೆಲೆಗಳು ಹೆಚ್ಚಾಗಿವೆ.
ಡಲ್ಲಾಸ್‌ನಲ್ಲಿರುವ ಪ್ರವಾಸಿ ಭಾರತೀಯ ರಜತ್ ಅವರು ವಾಲ್‌ಮಾರ್ಟ್ ಅಂಗಡಿಯಲ್ಲಿ ಭಾರತೀಯ ಆಹಾರ ಉತ್ಪನ್ನಗಳ ಬೆಲೆಗಳನ್ನು ವಿಡಿಯೋದಲ್ಲಿ ತೋರಿಸಿದ್ದು, ಅದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಭಾರತದಲ್ಲಿ ₹10ಕ್ಕೆ ಸಿಗುವ ಪಾರ್ಲೆ-ಜಿ ಬಿಸ್ಕತ್ತು ಅಮೆರಿಕದಲ್ಲಿ ₹370ಕ್ಕೆ ಮಾರಾಟವಾಗುತ್ತಿದೆ. ಹಾಗೆಯೇ ಹಲ್ದಿರಾಮ್ ತಿಂಡಿಗಳು, ಮಸಾಲೆಗಳು ತಲಾ ₹300ಕ್ಕೂ ಹೆಚ್ಚು ಬೆಲೆಯಲ್ಲಿ ಸಿಗುತ್ತಿವೆ. ₹20 ಬೆಲೆಯ ಹೈಡ್ & ಸೀಕ್ ಬಿಸ್ಕತ್ತು ಅಮೆರಿಕದಲ್ಲಿ ₹320ಕ್ಕೆ ತಲುಪಿದೆ. ಬೇಳೆಕಾಳುಗಳೂ ಅರ್ಧ ಕೆ.ಜಿಗೆ ₹400ಕ್ಕೆ ಲಭ್ಯವಾಗುತ್ತಿವೆ.
ಪ್ರವಾಸಿ ಭಾರತೀಯರು “ಅಮೆರಿಕದಲ್ಲಿ ಸಂಪಾದನೆ ಹೆಚ್ಚು, ಆದರೆ ಖರ್ಚುಗಳು ಸಹ ಅಷ್ಟೇ ಹೆಚ್ಚು. ಸುಂಕದಿಂದ ಸಾಮಾನ್ಯ ಭಾರತೀಯ ಉತ್ಪನ್ನಗಳೇ ಐಷಾರಾಮಿ ವಸ್ತುಗಳಾಗಿವೆ” ಎಂದು ಬೇಸರ ವ್ಯಕ್ತಪಡಿಸಿದ್ದಾರೆ.
ಟ್ರಂಪ್ ಸರ್ಕಾರದ ನೀತಿಗಳಿಂದಲೇ ಈ ಬೆಲೆ ಏರಿಕೆ ಸಂಭವಿಸಿದೆ ಎಂದು ನೆಟ್ಟಿಗರು ಅಭಿಪ್ರಾಯಪಟ್ಟಿದ್ದಾರೆ. ಸಾಗಣೆ ವೆಚ್ಚ, ಆಮದು ಸುಂಕ ಹಾಗೂ ಟ್ರಂಪ್ ವಿಧಿಸಿರುವ ಹೆಚ್ಚುವರಿ ಸುಂಕಗಳ ಪರಿಣಾಮವಾಗಿ ಭಾರತದಲ್ಲಿ ₹10 ಬಿಸ್ಕತ್ತು ಅಮೆರಿಕದಲ್ಲಿ ₹370ಕ್ಕೆ ತಲುಪಿದೆ.
ಅಮೆರಿಕದಲ್ಲಿ ನೆಲೆಸಲು ಬಯಸುವ ಭಾರತೀಯರು ಈ ಬೆಲೆ ಏರಿಕೆ ವಿಡಿಯೋ ನೋಡಿ ಆತಂಕ ವ್ಯಕ್ತಪಡಿಸುತ್ತಿದ್ದಾರೆ. ಜೀವನಮಟ್ಟ ಉತ್ತಮವಾದರೂ ಖರ್ಚುಗಳು ಗಗನಕ್ಕೇರಿರುವ ಅಮೆರಿಕದಲ್ಲಿ ನೆಲೆಸುವ ಮುನ್ನ ಎರಡೂವರೆ ಸಲ ಯೋಚಿಸಬೇಕಾಗಿದೆ ಎಂಬ ಅಭಿಪ್ರಾಯ ಹರಿದಾಡುತ್ತಿದೆ.














