ಪುತ್ತೂರು: ಮಾಜಿ ಪ್ರಧಾನಿ ಇಂದಿರಾಗಾಂಧಿಯವರು ಬ್ರಹ್ಮಶ್ರೀ ನಾರಾಯಣ ಗುರುಗಳ ಸಿದ್ಧಾಂತಕ್ಕೆ ಮಾರುಹೋಗಿ, ಅವರ ತತ್ವಗಳನ್ನು ದೇಶದಲ್ಲಿ ಜಾರಿಗೆ ತಂದು “ಉಳುವವನೇ ಭೂಮಿಯ ಒಡೆಯ” ಎಂಬ ಮಹತ್ವದ ಭೂ ಮಸೂದೆ ಕಾನೂನು ಜಾರಿಗೆ ತಂದರು. ಈ ಕಾನೂನಿಗೆ ನಾರಾಯಣ ಗುರುಗಳ ತತ್ವವೇ ಪ್ರೇರಣೆಯಾಗಿತ್ತು ಎಂದು ಪುತ್ತೂರು ಶಾಸಕರಾದ ಅಶೋಕ್ ರೈ ಹೇಳಿದರು.

ಅವರು ಪುತ್ತೂರಿನ ಬ್ರಹ್ಮಶ್ರೀ ಸಭಾಭವನದಲ್ಲಿ ಶ್ರೀನಾರಾಯಣಗುರುಸ್ವಾಮಿ ಬಿಲ್ಲವ ಸಂಘ ಹಾಗೂ ನಾರಾಯಣಗುರು ಸ್ವಾಮಿ ಮಂದಿರದ ಜಂಟಿ ಆಶ್ರಯದಲ್ಲಿ ನಡೆದ 171ನೇ ನಾರಾಯಣಗುರು ಜಯಂತಿ ಕಾರ್ಯಕ್ರಮದಲ್ಲಿ ಮಾತನಾಡಿದರು.

“ದೇಶದಲ್ಲಿ ಅಸಮಾನತೆ, ಜಾತಿ ವ್ಯವಸ್ಥೆ ವಿಜ್ರಂಭಿಸುತ್ತಿದ್ದ ಕಾಲದಲ್ಲಿ ನಾರಾಯಣಗುರುಗಳು ಸಮಾನತೆಯ ಸಿದ್ಧಾಂತವನ್ನು ಜಗತ್ತಿಗೆ ಸಾರಿದರು. ಒಂದೇ ಜಾತಿ – ಒಂದೇ ಮತ – ಒಂದೇ ದೇವರು ಎಂಬ ಅವರ ಸಂದೇಶ ಸಮಾಜ ಸುಧಾರಣೆಗೆ ದಾರಿ ತೋರಿಸಿತು. ಸಮಾಜದ ಕೊನೆಯ ವ್ಯಕ್ತಿಗೂ ಶಿಕ್ಷಣ, ಗೌರವ ಸಿಗಬೇಕು ಎಂಬ ಉದ್ದೇಶದಿಂದ ನಾರಾಯಣಗುರುಗಳು ಹೋರಾಟ ನಡೆಸಿದರು. ಅವರನ್ನು ನೆನೆಸುವುದು ಪ್ರತಿಯೊಬ್ಬರ ಕರ್ತವ್ಯ” ಎಂದು ಶಾಸಕರು ಹೇಳಿದರು.

ಅಕ್ರಮ ಸಕ್ರಮಕ್ಕೂ ನಾರಾಯಣಗುರುಗಳ ತತ್ವವೇ ಕಾರಣ
“ಇಂದು ನಾವು ಅಕ್ರಮ ಸಕ್ರಮ ಅಥವಾ 94C, 94CC ಅಡಿ ಸರ್ಕಾರಿ ಭೂಮಿಯನ್ನು ಸಕ್ರಮ ಮಾಡಿಕೊಂಡಿದ್ದರೆ, ಅದಕ್ಕೂ ನಾರಾಯಣಗುರುಗಳ ಸಿದ್ಧಾಂತವೇ ಕಾರಣವಾಗಿದೆ. ಅವರು ಇಲ್ಲದಿದ್ದರೂ ಅವರ ತತ್ವಗಳು ಇಂದು ಜಗತ್ತಿಗೆ ನೀತಿ ಪಾಠವಾಗಿವೆ” ಎಂದು ಅಶೋಕ್ ರೈ ಹೇಳಿದರು.

ಬಿಲ್ಲವ ಸಂಘಕ್ಕೂ ಭೂಮಿ ಭರವಸೆ
ಬಿಲ್ಲವ ಸಂಘಕ್ಕೂ ಭೂಮಿ ಮಂಜೂರಾತಿ ಭರವಸೆ ನೀಡಿದ ಅವರು, “ಸಂಘದವರು ಸರಕಾರಿ ಜಾಗವನ್ನು ಪತ್ತೆಹಚ್ಚಿ ದಾಖಲೆಗಳನ್ನು ನೀಡಿದಲ್ಲಿ ನಾನು ಮುಖ್ಯಮಂತ್ರಿಗಳ ಅನುಮೋದನೆ ಪಡೆದು ಭೂಮಿ ಕೊಡಿಸುವುದಕ್ಕೆ ಕ್ರಮ ಕೈಗೊಳ್ಳುತ್ತೇನೆ. ಈಗಾಗಲೇ ಹಲವಾರು ಸಂಘಗಳಿಗೆ ಸರ್ಕಾರ ಭೂಮಿ ನೀಡಿದೆ” ಎಂದು ಹೇಳಿದರು.

Leave a Reply

Your email address will not be published. Required fields are marked *

Join WhatsApp Group
error: Content is protected !!