ಪುತ್ತೂರು: ವಿಟ್ಲ ಮತ್ತು ಉಪ್ಪಿನಂಗಡಿಗೆ ಅಗ್ನಿಶಾಮಕ ಠಾಣೆ ನಿರ್ಮಾಣದ ಅಗತ್ಯವಿದ್ದು, ಈ ಬಗ್ಗೆ ಸರಕಾರದ ಗಮನ ಸೆಳೆದಿರುವ ಪುತ್ತೂರು ಶಾಸಕ ಅಶೋಕ್ ರೈ ಅವರು 15 ದಿನಗಳ ಒಳಗೆ ಜಾಗ ಮಂಜೂರಾತಿ ಪ್ರಕ್ರಿಯೆ ಪೂರ್ಣಗೊಳಿಸುವಂತೆ ಕಂದಾಯ ಇಲಾಖೆಗೆ ಸೂಚನೆ ನೀಡಿದ್ದಾರೆ.

ಸೋಮವಾರ ಶಾಸಕರನ್ನು ಭೇಟಿಯಾದ ಜಿಲ್ಲಾ ಅಗ್ನಿಶಾಮಕ ದಳದ ಅಧಿಕಾರಿ ಮಹಮ್ಮದ್ ಜುಲ್ಫಿಕರ್ ನವಾಝ್ ಕೆ.ಪಿ. ಅವರು, ವಿಟ್ಲದಲ್ಲಿ ಈಗಾಗಲೇ ಜಾಗ ಗುರುತಿಸಲಾಗಿರುವುದಾಗಿ ತಿಳಿಸಿ, ಉಪ್ಪಿನಂಗಡಿಯಲ್ಲಿ ಜಾಗದ ಅವಶ್ಯಕತೆಯಿರುವ ಬಗ್ಗೆ ಚರ್ಚೆ ನಡೆಸಿದರು. ಈ ವೇಳೆ ಶಾಸಕರು ತಕ್ಷಣವೇ ಕಂದಾಯ ಅಧಿಕಾರಿಗಳೊಂದಿಗೆ ಸಂಪರ್ಕಿಸಿ, 15 ದಿನಗಳಲ್ಲಿ ಜಾಗ ಗುರುತು ಮಾಡಿ ಇಲಾಖೆಗೆ ಹಸ್ತಾಂತರಿಸುವಂತೆ ನಿರ್ದೇಶನ ನೀಡಿದರು.

ವಿಟ್ಲ ಮತ್ತು ಉಪ್ಪಿನಂಗಡಿಯಲ್ಲಿ ಅಗ್ನಿಶಾಮಕ ಠಾಣೆಗಳ ಸ್ಥಾಪನೆ ಈ ಭಾಗದ ಜನರ ದೀರ್ಘಕಾಲದ ಬೇಡಿಕೆಯಾಗಿದ್ದು, ಈ ಬಗ್ಗೆ ಅಧಿವೇಶನದಲ್ಲೂ ಪ್ರಸ್ತಾಪಗೊಂಡಿತ್ತು. ಜಾಗ ಮಂಜೂರಾದ ತಕ್ಷಣವೇ ಅಗತ್ಯ ಅನುದಾನ ಬಿಡುಗಡೆ ಮಾಡಿ ನಿರ್ಮಾಣ ಕಾರ್ಯ ಪ್ರಾರಂಭವಾಗಲಿದೆ ಎಂದು ಶಾಸಕರು ಹೇಳಿದರು.

ವಿಟ್ಲದಲ್ಲಿ ಠಾಣೆ ನಿರ್ಮಾಣವಾದರೆ ಸುತ್ತಮುತ್ತಲಿನ ಪ್ರದೇಶಗಳಿಗೆ ಸೌಲಭ್ಯ ಒದಗುತ್ತದೆ. ಉಪ್ಪಿನಂಗಡಿಯಲ್ಲಿ ಠಾಣೆ ನಿರ್ಮಾಣವಾದರೆ ಉಪ್ಪಿನಂಗಡಿ ಹಾಗೂ ಕಡಬ ಭಾಗಕ್ಕೂ ಅನುಕೂಲವಾಗಲಿದೆ ಎಂದು ಶಾಸಕರು ತಿಳಿಸಿದರು.

Leave a Reply

Your email address will not be published. Required fields are marked *

Join WhatsApp Group
error: Content is protected !!