
ಮಂಗಳೂರು:ಉಳ್ಳಾಲದಲ್ಲಿ ಬಾಲಕಿಯ ಕುತ್ತಿಗೆಯಿಂದ ಚಿನ್ನದ ಸರ ಕಿತ್ತುಕೊಂಡ ಪ್ರಕರಣದಲ್ಲಿ ಉಳ್ಳಾಲದ ನಿವಾಸಿ ಮಿನ್ನತ್ ಎಂಬ ಮಹಿಳೆಯನ್ನು ಪೊಲೀಸರು ಬಂಧಿಸಿದ್ದಾರೆ.
ಬೆಳ್ಮ ಗ್ರಾಮದ ನಿವಾಸಿ ರಹಮತ್ ಎಂಬವರು 02-06-2025 ರಂದು ತಮ್ಮ ಮಕ್ಕಳೊಂದಿಗೆ ತೊಕ್ಕೊಟ್ಟು ಗ್ರಾಮದಲ್ಲಿರುವ ಸಾಗರ ಕಲೆಕ್ಷನ್ ಅಂಗಡಿಗೆ ಬಟ್ಟೆ ಖರೀದಿಸಲು ತೆರಳಿದಾಗ, ಮಳೆ ಕಾರಣದಿಂದ ಸ್ಟ್ರೀಟ್ ಪ್ಯಾಲೇಸ್ ಬೇಕರಿಯ ಬಳಿ ನಿಂತಿದ್ದರು. ಆ ವೇಳೆಯಲ್ಲಿ ಬುರ್ಖಾ ಧರಿಸಿದ್ದ ಮಹಿಳೆ ಅವರ ಮಗಳ ಕುತ್ತಿಗೆಯಲ್ಲಿದ್ದ 10 ಗ್ರಾಂ ತೂಕದ ಚಿನ್ನದ ಸರವನ್ನು ಕಿತ್ತುಕೊಂಡು ಪರಾರಿಯಾಗಿದ್ದರು. ಈ ಸಂಬಂಧ ಉಳ್ಳಾಲ ಠಾಣೆಯಲ್ಲಿ ಮೊ.ನಂ. 8/2025, ಕಲಂ 304(2) ಬಿ.ಎನ್.ಎಸ್ ಅಡಿ ಪ್ರಕರಣ ದಾಖಲಾಗಿತ್ತು.
ತನಿಖೆ ಕೈಗೊಂಡ ಪೊಲೀಸರು ಮಾಹಿತಿ ಆಧರಿಸಿ ಸೆಪ್ಟೆಂಬರ್ 12ರಂದು ಆರೋಪಿ ಮಿನ್ನತ್ ಅವರನ್ನು ವಶಕ್ಕೆ ಪಡೆದು ಕಳವುಗೈದ 10 ಗ್ರಾಂ ಚಿನ್ನದ ಸರವನ್ನು ವಶಪಡಿಸಿಕೊಂಡಿದ್ದಾರೆ.
ಇದಲ್ಲದೆ, ವಿಚಾರಣೆ ವೇಳೆ ಆರೋಪಿತೆ ಮಿನ್ನತ್ ಅವರು 09-07-2025 ರಂದು ಪಜೀರ್‌ನ ಕೆ.ಎಂ.ಎಸ್ ಕನ್ವೆನ್ ಹಾಲ್‌ನಲ್ಲಿ ನಡೆದ ಮದುವೆ ಸಮಾರಂಭದಲ್ಲಿ ಬ್ಯಾಗಿನಿಂದ 8 ಗ್ರಾಂ ತೂಕದ ಚಿನ್ನದ ಸರವನ್ನು ಕಳವು ಮಾಡಿರುವುದಾಗಿ ಒಪ್ಪಿಕೊಂಡಿದ್ದು, ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಕೊಣಾಜೆ ಠಾಣೆಯಲ್ಲಿ ಅ.ಕ್ರ. 107/2025, ಕಲಂ 303(2) ಬಿ.ಎನ್.ಎಸ್ ಅಡಿ ಪ್ರಕರಣ ದಾಖಲಾಗಿದೆ. ಆ ಚಿನ್ನದ ಸರವನ್ನೂ ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಒಟ್ಟು 18 ಗ್ರಾಂ ತೂಕದ, ರೂ. 1,80,000 ಮೌಲ್ಯದ ಚಿನ್ನದ ಸರಗಳನ್ನು ವಶಪಡಿಸಿಕೊಂಡಿರುವ ಪೊಲೀಸರು, ಆರೋಪಿತೆಯನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿದ್ದು, 14 ದಿನಗಳ ನ್ಯಾಯಾಂಗ ಬಂಧನ ವಿಧಿಸಲಾಗಿದೆ.









