
ಹಾಸನದಲ್ಲಿ (Hassan) ಗಣೇಶ ಮೂರ್ತಿ ವಿಸರ್ಜನೆ (Ganesh Festival) ವೇಳೆ ಸಂಭವಿಸಿದ ಘೋರ ದುರಂತ (Tragedy) ಸಂಬಂಧ 10 ಜನರ ಸಾವಿಗೆ ಕಾರಣವಾದ ಆರೋಪಿ ಕ್ಯಾಂಟರ್ ಚಾಲಕನನ್ನು ಪೊಲೀಸರು ಇದೀಗ ನೇರವಾಗಿ ಆಸ್ಪತ್ರೆಯಿಂದ ವಶಕ್ಕೆ ಪಡೆದುಕೊಂಡಿದ್ದಾರೆ.
ಮೊನ್ನೆ ರಾತ್ರಿ ಹಾಸನ ಹೊರವಲಯದ ಮೊಸಳೆ ಹೊಸಳ್ಳಿಯಲ್ಲಿ ಗಣೇಶ ವಿಸರ್ಜನೆ ಮೆರವಣಿಗೆ ವೇಳೆ ಕ್ಯಾಂಟರ್ ಒಂದು ಜನರ ಮೇಲೆ ಹರಿದು 10 ಜನರ ಸಾವಾಗಿದೆ. ಕ್ಯಾಂಟರ್ ಚಾಲಕ ಮದ್ಯಪಾನ ಮಾಡಿ ವಾಹನ ಚಲಾಯಿಸುತ್ತಿದ್ದರಿಂದಲೇ ದುರಂತ ಸಂಭವಿಸಿದೆ ಎನ್ನಲಾಗಿದೆ. ಅಪಘಾತದ ಬಳಿಕ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಕ್ಯಾಂಟರ್ ಚಾಲಕ ಡಿಸ್ಚಾರ್ಜ್ ಆಗುತ್ತಲೇ ಪೊಲೀಸರು ಆತನನ್ನು ವಶಕ್ಕೆ ಪಡೆದುಕೊಂಡಿದ್ದಾರೆ.
ಆರೋಪಿಯನ್ನು ಭುವನೇಶ್ ಎಂದು ಗುರುತಿಸಲಾಗಿದೆ. ನಿನ್ನೆ ರಾತ್ರಿ ಪೊಲೀಸರು ಆತನನ್ನು ವಶಕ್ಕೆ ಪಡೆದುಕೊಂಡಿದ್ದು, ಇಂದು ಆತನನ್ನು ನ್ಯಾಯಾಧೀಶರ ಮುಂದೆ ಪೊಲೀಸರು ಹಾಜರುಪಡಿಸುವ ಸಾಧ್ಯತೆ ಇದೆ. ನಾಗಮಂಗಲದ ಬೆಳ್ಳೂರು ಆಸ್ಪತ್ರೆಗೆ ಭುವನೇಶ್ ನನ್ನು ದಾಖಲಿಸಲಾಗಿತ್ತು. ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಿದ ಬಳಿಕ ಪೊಲೀಸರು ಆತನನ್ನು ಕಸ್ಟಡಿಗೆ ಪಡೆದುಕೊಂಡಿದ್ದಾರೆ.
ಚಾಲಕ ಅಪಘಾತದ ವೇಳೆ ಮದ್ಯಪಾನ ಮಾಡಿದ್ದಾನೆ ಎಂದು ಪರೀಕ್ಷಿಸಲು ರಕ್ತದ ಮಾದರಿಯನ್ನು ಸಂಗ್ರಹಿಸಿದ್ದು, ಇಂದು ಚಾಲಕ ಭುವನೇಶ್‌ನ ಬ್ಲಡ್ ರಿಪೋರ್ಟ್ ಬರುವ ಸಾಧ್ಯತೆ ಇದೆ. ಕ್ಯಾಂಟರ್ ಚಾಲಕ ಭುವನೇಶ್ ನಿರ್ಲಕ್ಷ್ಯವೇ ದುರಂತಕ್ಕೆ ಕಾರಣವಾಗಿದ್ದು ಆತನ ವಿರುದ್ಧ ಎಫ್‌ಐಆರ್ ದಾಖಲಿಸಲಾಗಿದೆ.









