ಏಷ್ಯಾ ಕಪ್ 2025ರ ಪ್ರಮುಖ ಪಂದ್ಯದಲ್ಲಿ ಶ್ರೀಲಂಕಾ ಜಯ ಸಾಧಿಸಿ ಸೂಪರ್‌ 4ಗೆ ಅರ್ಹತೆ ಪಡೆದಿದೆ. ಅಫ್ಘಾನಿಸ್ತಾನ ವಿರುದ್ದ ಮಾಡು ಇಲ್ಲವೆ ಮಡಿ ಪಂದ್ಯದಲ್ಲಿ ಜಯ ಸಾಧಿಸಿದ ಲಂಕಾ ಮುಂದಿನ ಹಂತಕ್ಕೆ ತೇರ್ಗಡೆಯಾಗಿದೆ. ಇದೇ ವೇಳೆ ಗೆಲ್ಲಲೇಬೇಕಾದ ಪಂದ್ಯದಲ್ಲಿ ಸೋತ ಅಫ್ಘಾನಿಸ್ತಾನ ತಂಡವು ಕೂಟದಿಂದ ಹೊರ ನಡೆದಿದೆ.

ಇದೇ ಪಂದ್ಯದಲ್ಲಿ ಲಂಕಾದ ಬೌಲರ್‌ ದುನಿತ್‌ ವೆಲ್ಲಲಗೆ (Dunith Wellalage) ಅವರು ಒಂದೇ ಓವರ್‌ ನಲ್ಲಿ ಐದು ಸಿಕ್ಸರ್‌ ಬಿಟ್ಟುಕೊಟ್ಟರು. ಅಫ್ಘಾನ್‌ ಇನ್ನಿಂಗ್ಸ್‌ ನ ಕೊನೆಯ ಓವರ್‌ ನಲ್ಲಿ ಮೊಹಮ್ಮದ್‌ ನಬಿ ಅವರು ವೆಲ್ಲಲಗೆ ಓವರ್‌ ನಲ್ಲಿ ಸತತ ಐದು ಸಿಕ್ಸರ್‌ ಬಾರಿಸಿದರು. ಕೊನೆಯ ಎಸೆತಕ್ಕೆ ನಬಿ ರನೌಟಾದರೂ ಈ ಓವರ್ ನಲ್ಲಿ 32 ರನ್‌ ಹರಿದು ಬಂತು.

ಅಫ್ಘಾನ್‌ ಪರ ಅದ್ಭುತ ಪ್ರದರ್ಶನ ನೀಡಿದ ಮೊಹಮ್ಮದ್‌ ನಬಿ ಕೇವಲ 22 ಎಸೆತಗಳಲ್ಲಿ 60 ರನ್‌ ಬಾರಿಸಿದರು. ಇದು ಮೂರು ಬೌಂಡರಿ ಮತ್ತು ಆರು ಸಿಕ್ಸರ್‌ ಒಳಗೊಂಡಿತ್ತು.

ದುರಾದೃಷ್ಟದ ಸಂಗತಿ ಎಂದರೆ ಬೌಲರ್‌ ದುನಿತ್‌ ವೆಲ್ಲಲಗೆ ಅವರ ತಂದೆ ಸುರಂಗ ವೆಲ್ಲಲಗೆ ಅವರು ಹೃದಯಾಘಾತದಿಂದ ಅಸುನೀಗಿದರು. ಶ್ರೀಲಂಕಾದಲ್ಲಿದ್ದ ಅವರು ನಿಧನರಾದ ಸುದ್ದಿ ಪಂದ್ಯ ನಡೆಯುತ್ತಿದ್ದ ವೇಳೆ ಲಂಕಾ ಟೀಂ ಮ್ಯಾನೇಜ್‌ಮೆಂಟ್‌ ಗೆ ತಿಳಿಸಲಾಗಿತ್ತು. ಪಂದ್ಯ ಮುಗಿದ ಬಳಿಕ ಕೋಚ್‌ ಸನತ್‌ ಜಯಸೂರ್ಯ ಅವರು ದುನಿತ್‌ ವೆಲ್ಲಲಗೆ ಅವರಿಗೆ ಈ ವಿಚಾರವನ್ನು ತಿಳಿಸಿದರು. ಬಳಿಕ ವೆಲ್ಲಲಗೆ ತವರಿಗೆ ಮರಳಿದ್ದಾರೆ.

ಜಯಸೂರ್ಯ ಮತ್ತು ವೆಲ್ಲಲಗೆ ಮಾತುಕತೆಯಲ್ಲಿ ತೊಡಗಿರುವ ವಿಡಿಯೋ ವೈರಲ್‌ ಆಗಿದೆ. ಶ್ರೀಲಂಕಾ ಕೋಚ್ ಆಟಗಾರನ ಭುಜದ ಸುತ್ತ ಕೈ ಹಾಕಿ, ಅವರ ಕುಟುಂಬದಲ್ಲಿನ ದುರಂತದ ಬಗ್ಗೆ ಅವರಿಗೆ ಹೇಳಿದರು.ದುನಿತ್ ವೆಲ್ಲಲಗೆ ಅವರ ತಂದೆ ಸುರಂಗ ಸ್ವಲ್ಪ ಸಮಯದ ಹಿಂದೆ ನಿಧನರಾದರು. ಅವರು ಕೂಡ ಸ್ವಲ್ಪ ಕ್ರಿಕೆಟ್ ಆಡಿದ್ದರು. ನಮ್ಮ ಶಾಲಾ ಕ್ರಿಕೆಟ್ ಕ್ಷೇತ್ರ ಎಷ್ಟು ದೊಡ್ಡದಾಗಿದೆ ಎಂದು ನಿಮಗೆ ತಿಳಿದಿದೆ. ನಾನು ನನ್ನ ಶಾಲೆಯಾದ ಸೇಂಟ್ ಪೀಟರ್ಸ್‌ಗೆ ನಾಯಕನಾಗಿದ್ದಾಗ ಅವರು ಪ್ರಿನ್ಸ್ ಆಫ್ ವೇಲ್ಸ್ ಕಾಲೇಜಿಗೆ ನಾಯಕರಾಗಿದ್ದರು” ಎಂದು ಶ್ರೀಲಂಕಾದ ಮಾಜಿ ಕ್ರಿಕೆಟಿಗ ರಸೆಲ್ ಅರ್ನಾಲ್ಡ್ ಸೋನಿ ಸ್ಪೋರ್ಟ್ಸ್ ನೆಟ್‌ವರ್ಕ್‌ನಲ್ಲಿ ಹೇಳಿದರು.

Leave a Reply

Your email address will not be published. Required fields are marked *

Join WhatsApp Group
error: Content is protected !!