
ಪುತ್ತೂರು: ಪುತ್ತೂರು ಮತ್ತು ಕಡಬ ಗ್ರಾಮಾಂತರ ಪ್ರದೇಶದ ಗ್ರಾಮ ಪಂಚಾಯತ್‌ಗಳಲ್ಲಿ ಸಲ್ಲಿಸಿರುವ ಏಕ ನಿವೇಶನ ಅನುಮೋದನೆ ಸಂಬಂಧಿತ ಗೊಂದಲ ನಿವಾರಣೆಗಾಗಿ ಸೆಪ್ಟೆಂಬರ್ 30ರಂದು ಶಾಸಕರ ಕಚೇರಿಯ 2ನೇ ಅಂತಸ್ತಿನಲ್ಲಿ ಯೋಜನಾ ಪ್ರಾಧಿಕಾರ ಅದಾಲತ್ ನಡೆಯಲಿದೆ ಎಂದು ಪುತ್ತೂರು ನಗರಯೋಜನಾ ಪ್ರಾಧಿಕಾರದ ಅಧ್ಯಕ್ಷ ಅಮಳ ರಾಮಚಂದ್ರ ಮತ್ತು ಕಾರ್ಯದರ್ಶಿ ಗುರುಪ್ರಸಾದ್ ತಿಳಿಸಿದ್ದಾರೆ.
2024ರ ಆಗಸ್ಟ್ 7ರಿಂದ ಪುತ್ತೂರು ನಗರಯೋಜನಾ ಪ್ರಾಧಿಕಾರಕ್ಕೆ ಏಕ ನಿವೇಶನ ವಿನ್ಯಾಸ ಅನುಮೋದನೆ ಅಧಿಕಾರ ಹಸ್ತಾಂತರಗೊಂಡಿದ್ದು, ಈಗಾಗಲೇ ಹಲವು ಅರ್ಜಿಗಳಿಗೆ ಅನುಮೋದನೆ ನೀಡಲಾಗಿದೆ. ಆದರೆ 2025ರ ಮೇ 7ರಿಂದ ಜಾರಿಯಾದ 4ಕೆ ನಿಯಮಾವಳಿಯ ಹಿನ್ನೆಲೆಯಲ್ಲಿ ಕೆಲವು ಗೊಂದಲಗಳು ಉಂಟಾಗಿರುವುದರಿಂದ ಸಾರ್ವಜನಿಕರಿಗೆ ಹಾಗೂ ಪಂಚಾಯತ್ ಸಿಬ್ಬಂದಿಗೆ ತೊಂದರೆ ಆಗುತ್ತಿದೆ.
ಈ ಹಿನ್ನೆಲೆಯಲ್ಲಿ ನಡೆಯಲಿರುವ ಅದಾಲತ್‌ನಲ್ಲಿ ತಾ.ಪಂ ಕಾರ್ಯನಿರ್ವಹಣಾಧಿಕಾರಿ, ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳು ಹಾಗೂ ಸಂಬಂಧಿತ ಇಲಾಖೆಯ ಅಧಿಕಾರಿಗಳು ಭಾಗವಹಿಸಲಿದ್ದಾರೆ. ತಿರಸ್ಕೃತ ಅರ್ಜಿಗಳನ್ನು ಹೊರತುಪಡಿಸಿ, ಸರಿಯಾದ ದಾಖಲೆಗಳನ್ನು ಪೂರೈಸಲು ಸೂಚಿಸಲಾದ ಒಟ್ಟು 558 ಪ್ರಕರಣಗಳ ವಿಲೇವಾರಿ ಈ ಅದಾಲತ್ ಮೂಲಕ ನಡೆಯಲಿದೆ.
“ಇದು ಪುತ್ತೂರು ಮತ್ತು ಕಡಬ ತಾಲೂಕುಗಳ ಮಟ್ಟದಲ್ಲಿ ನಡೆಯುತ್ತಿರುವ ಪ್ರಥಮ ಅದಾಲತ್. ಗ್ರಾಮ ಪಂಚಾಯತ್ ಮತ್ತು ನಗರಯೋಜನಾ ಪ್ರಾಧಿಕಾರದ ಸಮನ್ವಯಕ್ಕೆ ಇದು ಬಹುಮುಖ್ಯ. ಕಡತಗಳನ್ನು ಸರಿಯಾದ ರೀತಿಯಲ್ಲಿ ಕಳುಹಿಸಿದರೆ ಕಾರ್ಯನಿರ್ವಹಣೆ ವೇಗವಾಗಲಿದೆ. ಜೊತೆಗೆ ಮಾಹಿತಿ ವಿನಿಮಯ ಕಾರ್ಯಗಾರವೂ ನಡೆಯಲಿದೆ” ಎಂದು ಅಧಿಕಾರಿಗಳು ಹೇಳಿದರು.






