
ಉತ್ತರ ಕನ್ನಡ: ಭಾರೀ ವಿವಾದಕ್ಕೆ ಕಾರಣವಾಗಿದ್ದ ಯೂಟ್ಯೂಬರ್ ಖ್ವಾಜಾ ಶಿರಹಟ್ಟಿ ಅಲಿಯಾಸ್ ಮುಕಳೆಪ್ಪ ಮತ್ತು ಗಾಯತ್ರಿ ನಡುವಿನ ಲವ್ ಮ್ಯಾರೇಜ್ ಪ್ರಕರಣಕ್ಕೆ ಇದೀಗ ಇಬ್ಬರೂ ವೀಡಿಯೋ ಮೂಲಕ ಸ್ಪಷ್ಟನೆ ನೀಡಿದ್ದಾರೆ.
ಮೂಲತಃ ಮುಂಡಗೋಡ ತಾಲೂಕಿನ ಸಬ್‌ರಿಜಿಸ್ಟರ್ ಕಚೇರಿಯಲ್ಲಿ ಜೂನ್ 5ರಂದು ಇಬ್ಬರೂ ರಿಜಿಸ್ಟರ್ ಮದುವೆಯಾಗಿದ್ದರು. ಆದರೆ ಈ ಮದುವೆ ಲವ್ ಜಿಹಾದ್ ಆರೋಪಗಳ ಹಿನ್ನೆಲೆ ವಿವಾದಕ್ಕೆ ಗುರಿಯಾಯಿತು. ವಿಚಾರಣೆ ಸಂದರ್ಭದಲ್ಲಿ ಯುವತಿ ಗಾಯತ್ರಿ, “ಮುಕಳೆಪ್ಪ ನನ್ನನ್ನು ಕಿಡ್ನ್ಯಾಪ್ ಮಾಡಿಲ್ಲ. ನಾನು ಸ್ವಯಂ ಇಚ್ಛೆಯಿಂದ ಮದುವೆಯಾಗಿದ್ದೇನೆ” ಎಂದು ಹೇಳಿಕೊಂಡಿದ್ದಳು.
ಇದೀಗ ಮುಕಳೆಪ್ಪ ವೀಡಿಯೋ ಮೂಲಕ ಪ್ರತಿಕ್ರಿಯೆ ನೀಡಿದ್ದು, “ನಾನು ಯಾವುದೇ ಲವ್ ಜಿಹಾದ್ ಮಾಡಿಲ್ಲ. ನಾವು ಇಬ್ಬರೂ ಪರಸ್ಪರ ಇಷ್ಟಪಟ್ಟು ಮದುವೆಯಾಗಿದ್ದೇವೆ. ಯಾರೂ ಮತಾಂತರಗೊಂಡಿಲ್ಲ. ನನ್ನ ಪತ್ನಿ ಅವಳ ಧರ್ಮವನ್ನೇ ಪಾಲಿಸುತ್ತಾಳೆ, ನಾನು ನನ್ನ ಧರ್ಮವನ್ನೇ ಪಾಲಿಸುತ್ತೇನೆ. ಕಲಾವಿದರಲ್ಲಿ ಜಾತಿ-ಧರ್ಮ ಬೇಡ. ನಾವು ಕರ್ನಾಟಕದಲ್ಲಿ ಹುಟ್ಟಿದವರು, ನಮಗೆ ಬದುಕಲು ಅವಕಾಶ ನೀಡಿ” ಎಂದು ಮನವಿ ಮಾಡಿದ್ದಾರೆ.
ಅದೇ ವೇಳೆ ಗಾಯತ್ರಿಯೂ ಮಾತನಾಡಿ, “ನಾನು ಹಿಂದೂ ಆಗಿಯೇ ಇದ್ದೇನೆ. ನನ್ನ ಪತಿ ಮತಾಂತರ ಮಾಡಿದ್ದಾರೆ ಎನ್ನುವುದು ಸುಳ್ಳು. ಇದನ್ನು ಯಾರೂ ನಂಬಬೇಡಿ. ನಮ್ಮ ಬಗ್ಗೆ ತಪ್ಪು ಪ್ರಚಾರ ಮಾಡಬೇಡಿ. ಮುಕಳೆಪ್ಪನನ್ನು ಹೇಗೆ ನೋಡಿದ್ದೀರೋ ಅದೇ ರೀತಿ ಮುಂದೆ ಕೂಡ ನೋಡಿ. ನಮ್ಮನ್ನ ಬದುಕಲು ಬಿಡಿ” ಎಂದು ಕಣ್ಣೀರಿನಿಂದ ವಿನಂತಿಸಿಕೊಂಡಿದ್ದಾರೆ.






