ಪುತ್ತೂರು: ಉಪ್ಪಿನಂಗಡಿ ಸಮೀಪದ ಬಜತ್ತೂರು ಗ್ರಾಮದ ಪ್ರತಿಭಾವಂತ ಬಾಲಕಿ ಅಮೀಶಾ ಆನಂದ್ ಅಂತರಾಷ್ಟ್ರೀಯ ಮಹಿಳಾ ಇಂಡೋರ್ ಕ್ರಿಕೆಟ್ ವಿಶ್ವಕಪ್‌ಗಾಗಿ ಯುನೈಟೆಡ್ ಅರಬ್ ಎಮಿರೇಟ್ಸ್ ತಂಡಕ್ಕೆ ಆಯ್ಕೆಯಾಗಿದ್ದು, ಕರ್ನಾಟಕದ ಹೆಮ್ಮೆ ಹೆಚ್ಚಿಸಿದ್ದಾಳೆ.

14 ವರ್ಷದ ಅಮೀಶಾ, ಪ್ರಸ್ತುತ ದುಬೈಯಲ್ಲಿ 9ನೇ ತರಗತಿಯಲ್ಲಿ ವಿದ್ಯಾಭ್ಯಾಸ ಮಾಡುತ್ತಿದ್ದು, ಸೆಪ್ಟೆಂಬರ್ 27ರಿಂದ ಅಕ್ಟೋಬರ್ 4ರವರೆಗೆ ಶ್ರೀಲಂಕಾದ ಕೊಲಂಬೊದಲ್ಲಿ ನಡೆಯಲಿರುವ ವಿಶ್ವಕಪ್ ಟೂರ್ನಿಯಲ್ಲಿ ತನ್ನ ಕೌಶಲ್ಯ ಪ್ರದರ್ಶಿಸಲಿದ್ದಾರೆ. ಈ ಕೂಟದಲ್ಲಿ ಆಸ್ಟ್ರೇಲಿಯಾ, ನ್ಯೂಜಿಲ್ಯಾಂಡ್, ದಕ್ಷಿಣ ಆಫ್ರಿಕಾ, ಶ್ರೀಲಂಕಾ, ಭಾರತ ಸೇರಿದಂತೆ ಪ್ರಮುಖ ರಾಷ್ಟ್ರಗಳ ತಂಡಗಳು ಪಾಲ್ಗೊಳ್ಳುತ್ತಿವೆ.

ಬಜತ್ತೂರು ಗ್ರಾಮದ ವಳಾಲು ಪಟ್ಟೆಯ ನಿವಾಸಿ ಆನಂದ್ ಮತ್ತು ವಿನುತಾ ಆನಂದ್ ದಂಪತಿಯ ಪುತ್ರಿಯಾದ ಅಮೀಶಾ, ದುಬೈ ಕ್ರಿಕೆಟ್ ಬೋರ್ಡ್‌ನ ಅಂಡರ್-15, 16 ಹಾಗೂ 19 ವಿಭಾಗದ ಸೀಸನ್ (ಹಾರ್ಡ್) ಬಾಲ್ ಪಂದ್ಯಗಳಲ್ಲಿ ಇಂಗ್ಲೆಂಡ್, ನ್ಯೂಜಿಲ್ಯಾಂಡ್, ಅಮೆರಿಕಾ, ಒಮಾನ್ ತಂಡಗಳ ವಿರುದ್ಧ ಆಡಿದ ಅನುಭವ ಹೊಂದಿದ್ದಾರೆ. ಇಂಗ್ಲೆಂಡ್ ಕ್ರಿಕೆಟಿಗ ಜೋ ರೂಟ್ ಕ್ರಿಕೆಟ್ ಅಕಾಡೆಮಿ ಆಯೋಜಿಸಿದ್ದ ರೂಟ್‌ಕಪ್ ಅಂಡರ್-16 ವಿಭಾಗದಲ್ಲಿ ಸತತ ಎರಡನೇ ಬಾರಿ ದುಬೈ ತಂಡವನ್ನು ಪ್ರತಿನಿಧಿಸಿ, ತಂಡಕ್ಕೆ ಚಾಂಪಿಯನ್‌ಶಿಪ್ ತಂದುಕೊಟ್ಟಿದ್ದಾರೆ.

ಕ್ರಿಕೆಟ್ ಮಾತ್ರವಲ್ಲದೆ ವಾಲಿಬಾಲ್, ಅಥ್ಲೆಟಿಕ್ಸ್, ಈಜು, ಹಾಡುಗಾರಿಕೆ, ನೃತ್ಯ ಕ್ಷೇತ್ರಗಳಲ್ಲಿಯೂ ಸಮಾನ ಉತ್ಸಾಹ ಹೊಂದಿರುವ ಅಮೀಶಾ, ಮಾಜಿ ಅಂತಾರಾಷ್ಟ್ರೀಯ ಕ್ರಿಕೆಟಿಗ ನಿಶಾ ಆಲಿ ಹಾಗೂ ಎಮಿರೇಟ್ಸ್ ಕ್ರಿಕೆಟ್ ಬೋರ್ಡ್ ಅಧಿಕಾರಿ ಛಾಯಾ ಮುದ್ಗಲ್ ಅವರ ಮಾರ್ಗದರ್ಶನದಲ್ಲಿ ತರಬೇತಿ ಪಡೆಯುತ್ತಿದ್ದಾರೆ.

ಗ್ರಾಮೀಣ ಹಿನ್ನೆಲೆಯಿಂದ ಬಂದಿದ್ದರೂ ಅಂತರಾಷ್ಟ್ರೀಯ ವೇದಿಕೆಯಲ್ಲಿ ಹೆಸರು ಮಾಡುತ್ತಿರುವ ಅಮೀಶಾ ಅವರ ಸಾಧನೆಗೆ ತುಳುನಾಡಿನ ಜನತೆ ಹಾರೈಸುತ್ತಿದ್ದಾರೆ.

Leave a Reply

Your email address will not be published. Required fields are marked *

Join WhatsApp Group
error: Content is protected !!