ಕಡಬ: “ಕ್ರೀಡೆಯಲ್ಲಿ ಭಾಗವಹಿಸುವುದು ಕೇವಲ ಬಹುಮಾನ ಗಿಟ್ಟಿಸಿಕೊಳ್ಳುವ ಲೆಕ್ಕಾಚಾರಕ್ಕೆ ಸೀಮಿತವಾಗದೆ, ಪ್ರತಿಭೆ ಅನಾವರಣಕ್ಕೆ ಸಿಕ್ಕ ಅವಕಾಶವನ್ನು ಬಳಕೆ ಮಾಡಿಕೊಂಡು ಸಾಧನೆ ಮಾಡುವುದು ಮುಖ್ಯ” ಎಂದು ಸುಳ್ಯ ವಿಧಾನಸಭಾ ಕ್ಷೇತ್ರದ ಶಾಸಕಿ ಭಾಗೀರಥಿ ಮುರುಳ್ಯ ಹೇಳಿದರು.

ಕಡಬ ತಾಲೂಕು ರಾಮಕುಂಜ ಗ್ರಾಮದ ಶ್ರೀರಾಮಕುಂಜೇಶ್ವರ ಪದವಿ ಪೂರ್ವ ಕಾಲೇಜು ಹಾಗೂ ಕನ್ನಡ ಮಾಧ್ಯಮ ಪ್ರೌಢಶಾಲೆಯಲ್ಲಿ ಶನಿವಾರ ಮತ್ತು ಭಾನುವಾರ ಮೈಸೂರು ವಿಭಾಗ ಮಟ್ಟದ 14 ಮತ್ತು 17 ವಯೋಮಾನದ ಬಾಲಕ, ಬಾಲಕಿಯರ ಕಬಡ್ಡಿ ಪಂದ್ಯಾಟ ಆರಂಭವಾಗಿ, ಶಾಸಕಿ ಭಾಗೀರಥಿ ಮುರುಳ್ಯ ಅವರು ಉದ್ಘಾಟಿಸಿ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಅವರು ಮುಂದುವರೆದು, “ಶಾರೀರಿಕ, ಮಾನಸಿಕ ಹಾಗೂ ಭಾವನಾತ್ಮಕ ಬೆಳವಣಿಗೆಯಲ್ಲಿ ಕ್ರೀಡೆಯ ಪಾತ್ರ ಅಪಾರವಾಗಿದೆ. ಕ್ರೀಡೆಯಲ್ಲಿ ಸಾಧನೆ ಮಾಡಲು ಅನೇಕ ಸವಾಲುಗಳು ಎದುರಾಗುತ್ತವೆ. ಅದನ್ನು ಜೀವನಕ್ಕೆ ಸ್ಫೂರ್ತಿಯಾಗಿಸಿಕೊಂಡಾಗಲೇ ನಿಜವಾದ ಪ್ರತಿಫಲ ದೊರೆಯುತ್ತದೆ. ತೀರ್ಪುಗಾರರು ನ್ಯಾಯಯುತ ನಿರ್ಣಯ ನೀಡುವ ಮೂಲಕ ಕಬಡ್ಡಿಯ ಗೌರವವನ್ನು ಕಾಪಾಡಬೇಕು” ಎಂದರು.

ರಾಜ್ಯ ಅಮೆಚೂರು ಕಬಡ್ಡಿ ಅಸೋಸಿಯೇಶನ್ ಚೇರ್‌ಮನ್ ರಾಕೇಶ್ ಮಲ್ಲಿ, “ಕಬಡ್ಡಿಯಂತಹ ನಮ್ಮ ಮಣ್ಣಿನ ಕ್ರೀಡೆ ಗ್ರಾಮೀಣ ಭಾಗದಲ್ಲಿ ಆಯೋಜನೆಯಾದಾಗ ಗ್ರಾಮೀಣ ಪ್ರತಿಭೆಗಳಿಗೆ ವೇದಿಕೆ ಸಿಗುತ್ತದೆ. ಶ್ರೀರಾಮಕುಂಜೇಶ್ವರ ವಿದ್ಯಾಸಂಸ್ಥೆ ದೊಡ್ಡ ಮಟ್ಟದ ಕ್ರೀಡಾ ಕಾರ್ಯಕ್ರಮವನ್ನು ಅರ್ಥಗರ್ಭಿತವಾಗಿ ಆಯೋಜಿಸಿ ಮಾದರಿಯಾಗಿದೆ” ಎಂದು ಪ್ರಶಂಸೆ ವ್ಯಕ್ತಪಡಿಸಿದರು.

ಕಾರ್ಯಕ್ರಮದಲ್ಲಿ ದ.ಕ ಜಿಲ್ಲಾ ಅಮೆಚೂರು ಕಬಡ್ಡಿ ಅಸೋಸಿಯೇಶನ್ ಕಾರ್ಯಧ್ಯಕ್ಷ ಚಂದ್ರಹಾಸ ಶೆಟ್ಟಿ, ಅಂತರಾಷ್ಟ್ರೀಯ ಕಬಡ್ಡಿ ತೀರ್ಪುಗಾರ ಲಕ್ಷ್ಮೀನಾರಾಯಣ ಶುಭಾಶಯ ಕೋರಿದರು.

ರಾಮಕುಂಜ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಸುಚೇತಾ ಆತೂರು ಮೆರವಣಿಗೆಗೆ ಚಾಲನೆ ನೀಡಿದರು. ಶಿಕ್ಷಕಿ ಹೇಮಲತಾ ಪ್ರದೀಪ ಬಾಕಿಲ ಉದ್ಘಾಟನೆ ನೆರವೇರಿಸಿದರು. ಯುಎಇಯಲ್ಲಿ ವಿಜ್ಞಾನಿಯಾಗಿರುವ ವೀರಪ್ಪ ಪುರಿಕೆರೆ ಮಳಿಗೆಗಳನ್ನು ಉದ್ಘಾಟಿಸಿದರು. ಫಿನ್‌ಲ್ಯಾಂಡ್‌ನಲ್ಲಿ ವಿಜ್ಞಾನಿಯಾಗಿರುವ ಡಾ. ನೋಣಪ್ಪ ಅವರು ಸಭಾಂಗಣ ಉದ್ಘಾಟಿಸಿದರು. ಬಿ.ಎಮ್. ಗ್ರೂಪ್ ಮುಖ್ಯಸ್ಥ ಡಾ. ವಿ. ಕನಕರಾಜ್ ಹಾಗೂ ಕಬಡ್ಡಿ ಆಯೋಜನಾ ಸಮಿತಿ ಉಪಾಧ್ಯಕ್ಷ ಸೇಸಪ್ಪ ರೈ ಕ್ರೀಡಾಂಗಣ ಉದ್ಘಾಟಿಸಿದರು.

ಕಾರ್ಯಕ್ರಮದಲ್ಲಿ ದಿನೇಶ್ ಎಂ. ನೆಟ್ಟಣ, ಅಭಿನಂದನ್ ಎಸ್, ಗುರುಪ್ರಸಾದ್, ಚಂದ್ರಶೇಖರ ಕೆ, ಉಮೇಶ್ ಕೆ.ಎಂ, ಕೇಶವ ಅಮೈ, ರಾಧಾಕೃಷ್ಣ ಕೆ.ಎಸ್, ಟಿ. ನಾರಾಯಣ ಭಟ್, ಗಣೇಶ್ ಕಟ್ಟಪುಣಿ, ಪುರುಷೋತ್ತಮ ಪೂಜಾರಿ, ರತನ್ ಶೆಟ್ಟಿ, ಚಂದ್ರಶೇಖರ ಸಣ್ಣಾರ ಮೊದಲಾದವರು ಹಾಜರಿದ್ದರು.

ವಿದ್ಯಾರ್ಥಿಗಳು ನಾಡಗೀತೆ, ರೈತಗೀತೆ, ರಾಷ್ಟ್ರಗೀತೆ, ಸಂವಿಧಾನ ಪಠಿಕೆ ಹಾಗೂ ಪ್ರತಿಜ್ಞಾವಿಧಿ ಹಾಡಿದರು. ದಿವಾಕರ ಉಪ್ಪಳ ಮತ್ತು ವಿಜಯ್ ಅತ್ತಾಜೆ ಕ್ರೀಡಾ ಉದ್ಯೋಷಕರಾಗಿದ್ದರು.

ಭುವನೇಶ್ ಎಂ ಪ್ರಸ್ತಾವನೆ ಮಾಡಿದರು. ಸತೀಶ್ ಭಟ್ ಸ್ವಾಗತಿಸಿದರು. ಚಕ್ರಪಾಣಿ ವಂದಿಸಿದರು. ಉಪನ್ಯಾಸಕ ಚೇತನ್ ಕುಮಾರ್ ಆನೆಗುಂಡಿ ನಿರೂಪಣೆ ನಡೆಸಿದರು.

Leave a Reply

Your email address will not be published. Required fields are marked *

Join WhatsApp Group
error: Content is protected !!