
ಪುತ್ತೂರು: “ಧಾರ್ಮಿಕ ಕೇಂದ್ರಗಳಿಗೆ ಬಂದು ಶಾಲು ಹಾಕಿಸಿಕೊಳ್ಳುವುದು ಹಿಂದುತ್ವವಲ್ಲ, ದೇವಾಲಯ ಮತ್ತು ದೈವಸ್ಥಾನಗಳನ್ನು ಅಭಿವೃದ್ದಿ ಮಾಡುವುದು ನಿಜವಾದ ಹಿಂದುತ್ವ” ಎಂದು ಶಾಸಕ ಅಶೋಕ್ ರೈ ಹೇಳಿದರು.
ಅವರು ಪಡ್ಡಾಯೂರು ಶ್ರೀ ಅನ್ನಪೂರ್ಣೇಶ್ವರಿ ಭಜನಾಮಂದಿರದಲ್ಲಿ ಸುಮಾರು ₹5 ಲಕ್ಷ ವೆಚ್ಚದಲ್ಲಿ ನಿರ್ಮಿಸಲಾದ ತಡೆಗೋಡೆಯ ಉದ್ಘಾಟನೆ ಕಾರ್ಯಕ್ರಮದಲ್ಲಿ ಮಾತನಾಡಿದರು.
ಹಿಂದೂತ್ವದ ಹೆಸರಿನಲ್ಲಿ ಹಲವು ವರ್ಷಗಳಿಂದ ಕೇವಲ ಭಾಷಣ ಮಾಡಿದವರೇ ಹೊರತು ದೇವಸ್ಥಾನಗಳ ಅಭಿವೃದ್ಧಿ ಮಾಡಲು ಮುಂದೆ ಬಂದಿಲ್ಲ ಎಂದು ವ್ಯಂಗ್ಯವಾಡಿದ ಅವರು, “ಸರಕಾರಿ ಜಾಗದಲ್ಲಿರುವ ಎಲ್ಲಾ ಧಾರ್ಮಿಕ ಕೇಂದ್ರಗಳನ್ನು ಸಕ್ರಮೀಕರಣಗೊಳಿಸಿ ಆಯಾ ದೇವಾಲಯ/ಮಠಗಳ ಹೆಸರಿಗೆ ದಾಖಲೆ ಮಾಡಿಸುವ ಕನಸು ನನಗಿದೆ. ಇದಕ್ಕೆ ಜನರ ಸಹಕಾರ ಅಗತ್ಯ” ಎಂದರು.
ಶಿಕ್ಷಣದಲ್ಲಿ ಸಂಸ್ಕಾರದ ಅಗತ್ಯ
ಇಂದಿನ ಸಮಾಜದಲ್ಲಿ ಮಕ್ಕಳು ತಮ್ಮ ತಂದೆ-ತಾಯಿಯನ್ನು ಆಶ್ರಮಗಳಲ್ಲಿ ದಾಖಲಿಸುವುದು ಅಪಾಯಕಾರಿ ಬೆಳವಣಿಗೆ ಎಂದು ಅವರು ಅಭಿಪ್ರಾಯಪಟ್ಟರು. “ಶಿಕ್ಷಣದ ಜೊತೆಗೆ ಮಕ್ಕಳಲ್ಲಿ ಸಂಸ್ಕಾರ ಬೆಳೆಸಿದರೆ ಮಾತ್ರ ಕುಟುಂಬ ವ್ಯವಸ್ಥೆ ಉಳಿಯುತ್ತದೆ” ಎಂದು ಹೇಳಿದರು.
ಅಶೋಕಜನಮನಕ್ಕೆ ಆಹ್ವಾನ
ಅ.20ರಂದು ಕೊಂಬೆಟ್ಟು ತಾಲೂಕು ಕ್ರೀಡಾಂಗಣದಲ್ಲಿ ನಡೆಯುವ “ಅಶೋಕಜನಮನ ದೀಪಾವಳಿ” ಕಾರ್ಯಕ್ರಮಕ್ಕೆ ಕುಟುಂಬ ಸಮೇತರಾಗಿ ಭಾಗವಹಿಸಲು ಶಾಸಕ ಅಶೋಕ್ ರೈ ಆಹ್ವಾನ ನೀಡಿದರು. “ನಾನು ಬಡವರ ಸೇವೆಗಾಗಿ ಈ ಕಾರ್ಯಕ್ರಮ ಮಾಡುತ್ತಿದ್ದೇನೆ, ಯಾವುದೇ ರಾಜಕೀಯ ಉದ್ದೇಶ ಇಲ್ಲ” ಎಂದು ಸ್ಪಷ್ಟಪಡಿಸಿದರು.
ದೇವಸ್ಥಾನದ ಅಭಿವೃದ್ಧಿಗೆ ಶ್ಲಾಘನೆ
ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಅಭಿವೃದ್ಧಿಗೆ ಶಾಸಕರು ತೀವ್ರ ಚಟುವಟಿಕೆ ತೋರಿರುವುದಕ್ಕೆ ದೇವಸ್ಥಾನ ವ್ಯವಸ್ಥಾಪನಾ ಸಮಿತಿಯ ಅಧ್ಯಕ್ಷ ಈಶ್ವರಭಟ್ ಪ್ರಶಂಸೆ ವ್ಯಕ್ತಪಡಿಸಿ, “ಇಂತಹ ಶಾಸಕರು ನಮಗೆ ಸಿಕ್ಕಿರುವುದು ಪುಣ್ಯದ ಫಲ” ಎಂದು ಹೇಳಿದರು.
ಲೋಕೇಶ್ ಪಡ್ಡಾಯೂರಿನ ಛಲ
ನಗರ ವಲಯ ಕಾಂಗ್ರೆಸ್ ಅಧ್ಯಕ್ಷ ಲೋಕೇಶ್ ಪಡ್ಡಾಯೂರು ಭಜನಾಮಂದಿರ ತಡೆಗೋಡೆ ನಿರ್ಮಾಣಕ್ಕೆ ಕಾರಣಕರ್ತರು ಎಂದು ಶಾಸಕ ಶ್ಲಾಘಿಸಿದರು. “ತಮ್ಮ ಊರು ಅಭಿವೃದ್ಧಿಯಾಗಬೇಕು ಎಂಬ ಛಲ ಎಲ್ಲರಲ್ಲೂ ಇರಬೇಕು. ಲೋಕೇಶ್ ಎಲ್ಲರಿಗೂ ಮಾದರಿ” ಎಂದು ಪ್ರಶಂಸಿಸಿದರು.
ಕಾರ್ಯಕ್ರಮದಲ್ಲಿ ಅನ್ನಪೂರ್ಣೇಶ್ವರಿ ಭಜನಾಮಂದಿರದ ಅಧ್ಯಕ್ಷ ಗಣೇಶ್ ಗೌಡ, ಗೌರವಾಧ್ಯಕ್ಷ ರಾಮಣ್ಣ ಗೌಡ, ಪ್ರಗತಿಪರ ಕೃಷಿಕ ಗರಿಶ್ಚಂದ್ರ ಗೌಡ, ಯುವಕಮಂಡಲ ಅಧ್ಯಕ್ಷ ಆಕಾಶ್ ನಾಯ್ಕ, ವೀಣಾ ಭಾಸ್ಕರ, ಹರೀಶ್ ಬಂಗೇರ ಪಡ್ಡಾಯೂರು, ಯತೀಶ್ ಪಡ್ಡಾಯೂರು, ಪ್ರವೀಣ್ ಗೌಡ ಪಡ್ಡಾಯೂರು, ಚಂದ್ರಿಕಾ (ನಗರ ವಲಯ ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ) ಸೇರಿದಂತೆ ಅನೇಕರು ಹಾಜರಿದ್ದರು.
ಶಿವರಾಂ ನೆಲಪ್ಪಾಲು ಸ್ವಾಗತಿಸಿದರು, ಕಾರ್ಯಕ್ರಮವನ್ನು ನಿರೂಪಿಸಿದರು.






