ಚೆಕ್‌ ಬೌನ್ಸ್ ಪ್ರಕರಣಗಳಿಗೆ ಸಂಬಂಧಿಸಿದ ನೋಟಿಸ್‌ನಲ್ಲಿ ನಮೂದಿಸಿರುವ ಮೊತ್ತ ಮತ್ತು ಚೆಕ್‌ನಲ್ಲಿರುವ ಮೊತ್ತದಲ್ಲಿ ವ್ಯತ್ಯಾಸವಾಗಿದ್ದರೆ ಅಂತಹ ನೋಟಿಸ್‌ಗೆ ಕಾನೂನಿನ ಮಾನ್ಯತೆ ಇರುವುದಿಲ್ಲ ಎಂದು ಸುಪ್ರೀಂ ಕೋರ್ಟ್‌ ಹೇಳಿದೆ.

ಮುಖ್ಯ ನ್ಯಾಯಮೂರ್ತಿ ಬಿ.ಆರ್. ಗವಾಯಿ ಮತ್ತು ನ್ಯಾಯಮೂರ್ತಿ ಎನ್‌.ವಿ. ಅಂಜಾರಿಯಾ ಅವರ ಪೀಠವು ನೋಟಿಸ್‌ನಲ್ಲಿ ತಿಳಿಸಿರುವ ಮೊತ್ತ ಮತ್ತು ಚೆಕ್‌ನಲ್ಲಿ ನಮೂದಿಸಿರುವ ಮೊತ್ತ ಒಂದೇ ಆಗಿರುವುದು ಕಡ್ಡಾಯವಾಗಿದೆ ಎಂದು ತಿಳಿಸಿದೆ.

‘ನೋಟಿಸ್‌ನಲ್ಲಿ ಚೆಕ್ ವಿವರಗಳನ್ನು ಉಲ್ಲೇಖಿಸಿದ್ದರೂ, ಚೆಕ್ ಮೊತ್ತವನ್ನು ಸರಿಯಾಗಿ ಉಲ್ಲೇಖಿಸದಿದ್ದರೆ ಅಂತಹ ನೋಟಿಸ್‌ಗೆ ಕಾನೂನಿನಡಿ ಸಿಂಧುತ್ವ ಇರುವುದಿಲ್ಲ’ ಎಂದು ಹೇಳಿದ ಪೀಠ, ಚೆಕ್‌ ಬೌನ್ಸ್‌ ಪ್ರಕರಣವೊಂದನ್ನು ರದ್ದುಗೊಳಿಸುವುದನ್ನು ಎತ್ತಿಹಿಡಿಯಿತು.

ಮೇಲ್ಮನವಿದಾರ ಕಾವೇರಿ ಪ್ಲಾಸ್ಟಿಕ್ಸ್, ‘ನೆಗೋಷಿಯೆಬಲ್‌ ಇನ್‌ಸ್ಟ್ರುಮೆಂಟ್ಸ್ ಕಾಯ್ದೆಯ ಸೆಕ್ಷನ್ 138ರ ಅಡಿಯಲ್ಲಿ ಕಳುಹಿಸಲಾದ ನೋಟಿಸ್‌ನಲ್ಲಿ, ತಪ್ಪು ಮೊತ್ತವನ್ನು ನಮೂದಿಸಿರುವುದು ಮುದ್ರಣ ದೋಷ ಅಥವಾ ಕಣ್ತಪ್ಪಿನಿಂದ ಆಗಿರುವ ಸಾಧ್ಯತೆಯಿದೆ’ ಎಂದು ವಾದಿಸಿತು.

ಅದನ್ನು ಒಪ್ಪದ ಪೀಠ, ‘ಚೆಕ್ ಮೊತ್ತವನ್ನು ನೋಟಿಸ್‌ನಲ್ಲಿ ಉಲ್ಲೇಖಿಸದಿದ್ದರೆ ಅಥವಾ ನಿಜವಾದ ಚೆಕ್ ಮೊತ್ತಕ್ಕಿಂತ ಭಿನ್ನವಾದದ್ದನ್ನು ಉಲ್ಲೇಖಿಸಿದ್ದರೆ, ಅಂತಹ ನೋಟಿಸ್‌ ಕಾನೂನಿನ ದೃಷ್ಟಿಯಲ್ಲಿ ಅಮಾನ್ಯವಾಗಿರುತ್ತದೆ’ ಎಂದು ಅಭಿಪ್ರಾಯಪಟ್ಟಿತು.

ಆರೋಪಿ ನಂ.1 ಮೆಸರ್ಸ್ ನಾಫ್ತೋ ಗಾಜ್ ಇಂಡಿಯಾ ಪ್ರೈವೆಟ್ ಲಿಮಿಟೆಡ್ ಮತ್ತು ಅದರ ನಿರ್ದೇಶಕರು ನೀಡಿದ್ದ ಚೆಕ್‌ನ ಮೊತ್ತ ₹1 ಕೋಟಿ ಆಗಿದ್ದರೆ, ನೋಟಿಸ್‌ನಲ್ಲಿ ಮೇಲ್ಮನವಿದಾರರು ₹2 ಕೋಟಿ ನಮೂದಿಸಿದ್ದರು.

Leave a Reply

Your email address will not be published. Required fields are marked *

Join WhatsApp Group
error: Content is protected !!