
ಕೆಲಸ ಬಿಡಲು ಒಪ್ಪದ ಪತ್ನಿಯನ್ನು ಪತಿಯೇ 40ಕ್ಕೂ ಹೆಚ್ಚು ಬಾರಿ ಇರಿದು ಭೀಕರವಾಗಿ ಹತ್ಯೆ ಗೈದ ಬಳಿಕ ತಾನೂ ನೇಣುಬಿಗಿದುಕೊಂಡು ಆತ್ಮ ಹತ್ಯೆ ಮಾಡಿಕೊಂಡಿರುವ ಘಟನೆ ಜ್ಞಾನ ಭಾರತಿ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.
ಪ್ರಸ್ ಲೇಔಟ್ ನಿವಾಸಿ ಮಂಜು (27) ಕೊಲೆಯಾದ ಮಹಿಳೆ.ಬಳಿಕ ಪತಿ ಧರ್ಮಶೀಲನ್ (29) ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಭಾನುವಾರ ರಾತ್ರಿ ಉಲ್ಲಾಳ ಮುಖ್ಯರಸ್ತೆಯ ಪ್ರಸ್ ಲೇಔಟ್ ನಲ್ಲಿ ದುರ್ಘಟನೆ ನಡೆದಿದೆ.
ಮಂಜು ತಂದೆ ಪೆರಿಯಸ್ವಾಮಿ ಮನೆಗೆ ಬಂದಾಗ ಘಟನೆ ಬೆಳಕಿಗೆ ಬಂದಿದೆ ಎಂದು ಪೊಲೀಸರು ಮಾಹಿತಿ ನೀಡಿದರು.
ತಮಿಳುನಾಡು ಮೂಲದ ಧರ್ಮಶೀಲನ್ ಮತ್ತು ಮಂಜು 4 ವರ್ಷಗಳ ಹಿಂದೆ ಮದುವೆಯಾಗಿದ್ದರು. 2 ವರ್ಷಗಳಿಂದ ಧರ್ಮಶೀಲನ್ ದುಬೈನಲ್ಲಿ ಪೇಂಟಿಂಗ್ ಕೆಲಸ ಮಾಡುತ್ತಿದ್ದ. ಪತ್ನಿ ಮಂಜು ಬೆಂಗಳೂರಿನಲ್ಲೇ ಮನೆ ಸಮೀಪದ ಆಸ್ಪತ್ರೆಯಲ್ಲಿ ನರ್ಸಿಂಗ್ ಕೆಲಸ ಮಾಡಿಕೊಂಡಿದ್ದರು. ಹೀಗಾಗಿ ಮಂಜು ಜತೆ ಈಕೆ ಪೋಷಕರು ಪ್ರಸ್‌ಲೇಔಟ್‌ನ ಬಾಡಿಗೆ ಮನೆಯಲ್ಲಿ ವಾಸವಾಗಿದ್ದರು. ಈ ಮಧ್ಯೆ ದುಬೈನಿಂದ ಒಂದೂವರೆ ತಿಂಗಳ ಹಿಂದಷ್ಟೇ ತಮಿಳುನಾಡಿಗೆ ಬಂದಿದ್ದ ಧರ್ಮಶೀಲನ್, 1 ತಿಂಗಳ ಹಿಂದೆ ಬೆಂಗಳೂರಿಗೆ ಬಂದು ಪತ್ನಿ, ಅತ್ತೆ- ಮಾವನ ಜತೆ ವಾಸವಾಗಿದ್ದ. ಇಲ್ಲಿಯೂ ಗಾರೆ ಮತ್ತು ಪೇಂಟಿಂಗ್ ಕೆಲಸಕ್ಕೆ ಹೋಗುತ್ತಿದ್ದ. ಮಂಜು ತಂದೆ ಪೆರಿಯಸ್ವಾಮಿ ಕೂಡ ಗಾರೆ ಕೆಲಸಕ್ಕೆ ಹೋಗುತ್ತಿದ್ದರು ಎಂದು ಪೊಲೀಸರು ಮಾಹಿತಿ ನೀಡಿದರು.
ಕೆಲಸಕ್ಕೆ ಹೋಗದಂತೆ ಪತ್ನಿಗೆ ಒತ್ತಾಯ: ಕಳೆದ ಕೆಲ ದಿನಗಳಿಂದ ದಂಪತಿ ನಡುವೆ ಕೌಟುಂಬಿಕ ಮತ್ತು ವೈಯಕ್ತಿಕ ವಿಚಾರಕ್ಕೆ ಜಗಳ ನಡೆಯುತ್ತಿತ್ತು. ಇದರೊಂದಿಗೆ ಪತ್ನಿ ಮಂಜುಗೆ, “ನೀನು ಕೆಲಸಕ್ಕೆ ಹೋಗುವುದು ಬೇಡ. ಮನೆಯಲ್ಲೇ ಇರು. ನಾನು ಕೆಲಸಕ್ಕೆ ಹೋಗುತ್ತೇನೆ’ ಎಂದು ಪತಿ ಒತ್ತಾಯಿಸುತ್ತಿದ್ದ. ಆದರೆ, ಆಕೆ “ನಾನು ಕೆಲಸಕ್ಕೆ ಹೋಗಲೇಬೇಕು’ ಎಂದು ಹಠ ಹಿಡಿದಿದ್ದಳು. ಇದೇ ವಿಚಾರಕ್ಕೆ ಮನೆಯಲ್ಲಿ ಇಬ್ಬರ ನಡುವೆ ಗಲಾಟೆ ನಡೆಯುತ್ತಿತ್ತು. ಆಗ ಮಂಜು ಪೋಷಕರು ಜಗಳ ಬಿಡಿಸುತ್ತಿದ್ದರು ಎಂದು ಪೊಲೀಸರು ಮಾಹಿತಿ ನೀಡಿದರು.
40ಕ್ಕೂ ಹೆಚ್ಚು ಬಾರಿ ಇರಿತ: ಈ ನಡುವೆ 10 ದಿನಗಳ ಹಿಂದೆ ಮಂಜು ತಂದೆ ಪೆರಿಯಸ್ವಾಮಿ ಕೆಲಸಕ್ಕೆಂದು ತುಮಕೂರಿಗೆ ಹೋಗಿದ್ದರು. ತಾಯಿ, ಮತ್ತೂಬ್ಬ ಮಗಳಿಗೆ ಹೆರಿಗೆ ಆಗಿದ್ದರಿಂದ ನಾಲ್ಕೈದು ದಿನಗಳ ಹಿಂದೆ ತಮಿಳು ನಾಡಿಗೆ ಹೋಗಿದ್ದರು. ಭಾನುವಾರ ಮನೆಯಲ್ಲಿ ಇಬ್ಬರೇ ಇದ್ದ ಕಾರಣ ದಂಪತಿ ನಡುವೆ ಮತ್ತೆ ಜಗಳ ನಡೆದಿದೆ. ಅದು ವಿಕೋಪಕ್ಕೆ ಹೋದಾಗ, ಪತಿ ಧರ್ಮಶೀಲನ್ ತನ್ನ ಬಳಿಯಿದ್ದ ಚಾಕುವಿನಿಂದ ಪತ್ನಿಯ ಎದೆ, ಹೊಟ್ಟೆ, ತೊಡೆ, ಕೈ, ಕಾಲುಗಳಿಗೆ ಇರಿದಿದ್ದಾನೆ. ಆಕೆ ತೀವ್ರ ರಕ್ತಸ್ರಾವದಿಂದ ಮೃತಪಟ್ಟಿದ್ದಾಳೆ.
ಮೃತಪಟ್ಟ ಬಳಿಕವೂ ಮನಸೋ ಇಚ್ಛೆ ಇರಿತ!
ಪತ್ನಿಯನ್ನು 40ಕ್ಕೂ ಹೆಚ್ಚು ಬಾರಿ ಚಾಕುವಿನಿಂದ ಇರಿದು ಹತ್ಯೆಗೈದಿದ್ದಾರೆ. ಅಷ್ಟಕ್ಕೆ ಸುಮ್ಮನಾಗದ ಪತಿ, ಆಕೆ ಮೃತಪಟ್ಟ ಬಳಿಕವೂ ಮನಸೋ ಇಚ್ಛೆ ಇರಿದಿದ್ದಾನೆ. ಹೀಗೆ ಮಂಜು ದೇಹದ ಮೇಲೆ 40ಕ್ಕೂ ಹೆಚ್ಚು ಬಾರಿ ಇರಿದು ಭೀಕರವಾಗಿ ಹತ್ಯೆಗೈದಿದ್ದಾನೆ. ಬಳಿಕ ಕೋಣೆಯ ಫ್ಯಾನ್‌ಗೆ ನೇಣುಬಿಗಿದುಕೊಂಡು ಧರ್ಮಶೀಲನ್ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಭಾನುವಾರ ರಾತ್ರಿ 8 ಗಂಟೆ ಸುಮಾರಿಗೆ ಮಂಜು ತಂದೆ ಪೆರಿಯಸ್ವಾಮಿ ಮನೆಗೆ ಬಂದಾಗ ಯಾರು ಬಾಗಿಲು ತೆರೆದಿಲ್ಲ. ಬಳಿಕ ಮನೆ ಮಾಲಿಕರಿಂದ ಮಾಸ್ಟರ್ ಕೀ ಪಡೆದು ಒಳ ಹೋದಾಗ ಪುತ್ರಿಯ ಹತ್ಯೆ, ಅಳಿಯ ಆತ್ಮಹತ್ಯೆ ಮಾಡಿಕೊಂಡಿರುವುದು ಪತ್ತೆಯಾಗಿದೆ ಎಂದು ಪೊಲೀಸರು ಹೇಳಿದರು.
2 ಚಾಕು, ಹೊಸ ಹಗ್ಗ ತಂದಿದ್ದ ಪತಿ ಧರ್ಮಶೀಲನ್ !
ಪ್ರಾಥಮಿಕ ವಿಚಾರಣೆಯಲ್ಲಿ ತಮಿಳುನಾಡಿನಿಂದ ಬರುವಾಗಲೇ ಪತಿ ಧರ್ಮಶೀಲನ್ 2 ಚಾಕು ಮತ್ತು ಹಗ್ಗವನ್ನು ತಂದಿದ್ದಾನೆ ಎಂಬುದು ಗೊತ್ತಾಗಿದೆ. ಮನೆ ಪರಿಶೀಲನೆ ವೇಳೆ ಆತನ ಬ್ಯಾಗ್‌ನಲ್ಲಿ ಚಾಕುವೊಂದು ಪತ್ತೆಯಾಗಿದೆ. ಅದೇ ಮಾದರಿಯ ಮತ್ತೂಂದು ಚಾಕುವಿನಿಂದ ಪತ್ನಿಯನ್ನು ಕೊಂದಿದ್ದಾನೆ. ಬಳಿಕ ತಾನೂ ತಂದಿದ್ದ ಹಗ್ಗದಿಂದಲೇ ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂದು ಪೊಲೀಸರು ಮಾಹಿತಿ ನೀಡಿದರು.






