
ಪುತ್ತೂರು: “ಸ್ವಾತಂತ್ರ್ಯಕ್ಕಾಗಿ ಹೋರಾಡಿದ ಮಹಾನ್ ವ್ಯಕ್ತಿಗಳಲ್ಲಿ ಮಹಾತ್ಮ ಗಾಂಧೀಜಿಯವರು ಮುಂಚೂಣಿಯಲ್ಲಿದ್ದಾರೆ. ಅವರು ಅಹಿಂಸೆಯ ಮೂಲಕ ಜೀವನ ನಡೆಸಿ ದೇಶಕ್ಕೆ ಉತ್ತಮ ಸಂದೇಶ ನೀಡಿದ್ದಾರೆ. ಗಾಂಧೀ ತತ್ವಗಳು ಜನಜೀವನಕ್ಕೆ ಸದಾ ಪ್ರೇರಣೆಯಾಗಿದ್ದು, ಇಂದಿಗೂ ಅತಿ ಪ್ರಸ್ತುತ. ಅವರ ತತ್ವಗಳನ್ನು ನಮ್ಮ ಬದುಕಿನಲ್ಲಿ ಅಳವಡಿಸಿಕೊಂಡರೆ ನಿಜವಾದ ಗೌರವ ಸಲ್ಲಿಸಿದಂತಾಗುತ್ತದೆ” ಎಂದು ಶಾಸಕ ಅಶೋಕ್ ಕುಮಾರ್ ರೈ ಹೇಳಿದರು.
ಗುರುವಾರ ಪುತ್ತೂರು ಬಸ್ ನಿಲ್ದಾಣದ ಬಳಿಯ ಗಾಂಧೀ ಕಟ್ಟೆಯಲ್ಲಿ ತಾಲೂಕು ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿ ಹಾಗೂ ಗಾಂಧೀ ಕಟ್ಟೆ ಸಮಿತಿ ಆಶ್ರಯದಲ್ಲಿ ನಡೆದ ಗಾಂಧೀ ಜಯಂತಿ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಅವರು ಮುಂದುವರೆದು “ಬದುಕಿನಲ್ಲಿ ಎಷ್ಟೇ ಸವಾಲುಗಳು ಬಂದರೂ ಗಾಂಧೀಜಿ ತಮ್ಮ ಅಹಿಂಸಾ ತತ್ವವನ್ನು ಬಿಟ್ಟುಕೊಡಲಿಲ್ಲ. ನಾವು ಸಹ ದೇಶೀಯ ಉತ್ಪನ್ನಗಳ ಬಳಕೆಗೆ ಆದ್ಯತೆ ನೀಡಬೇಕು. ಭಾರತ ಕೇವಲ 79 ವರ್ಷಗಳಲ್ಲಿ ಆರ್ಥಿಕತೆ ಮತ್ತು ಅಭಿವೃದ್ಧಿಯಲ್ಲಿ ವೇಗವಾಗಿ ಮುನ್ನಡೆಯುತ್ತಿದ್ದು, ಮುಂದಿನ ವರ್ಷಗಳಲ್ಲಿ ವಿಶ್ವಗುರುವಾಗುವುದು ಖಚಿತ” ಎಂದರು.
ಕಾರ್ಯಕ್ರಮವನ್ನು ಉಪವಿಭಾಗಾಧಿಕಾರಿ ಸ್ಟೆಲ್ಲಾ ವರ್ಗೀಸ್ ದೀಪಪ್ರಜ್ವಲನೆ ಮೂಲಕ ಉದ್ಘಾಟಿಸಿದರು. ಹಿರಿಯ ಗಾಂಧೀವಾದಿ ಚಂದ್ರಹಾಸ ರೈ, ಪುದಾ ಸದಸ್ಯ ಲ್ಯಾನ್ಸಿ ಮಸ್ಕರೇನಿಯಸ್, ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಉಮೇಶ್ ನಾಯಕ್, ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಸುಬ್ಬಯ್ಯ ನಾಯ್ಕ, ಪೊಲೀಸ್ ನಿರೀಕ್ಷಕ ಜಾನ್ಸನ್ ಡಿಸೋಜ, ತಹಸೀಲ್ದಾರ್ ನಾಗರಾಜ್ ವಿ., ತಾಲೂಕು ವೈದ್ಯಾಧಿಕಾರಿ ಡಾ. ದೀಪಕ್ ರೈ, ಕ್ಷೇತ್ರ ಶಿಕ್ಷಣಾಧಿಕಾರಿ ವಿಷ್ಣುಪ್ರಸಾದ್ ಸೇರಿದಂತೆ ಅನೇಕ ಗಣ್ಯರು ಉಪಸ್ಥಿತರಿದ್ದರು.
ಗಾಂಧೀ ಕಟ್ಟೆ ಸಮಿತಿ ಸಂಚಾಲಕ ಕೃಷ್ಣಪ್ರಸಾದ್ ಆಳ್ವ ಸ್ವಾಗತಿಸಿದರು. ವಕೀಲರ ಸಂಘದ ಅಧ್ಯಕ್ಷ ಜಗನ್ನಾಥ ರೈ ವಂದಿಸಿದರು. ಸಮಿತಿ ಸದಸ್ಯ ಇಸಾಕ್ ಸಾಲ್ಮರ ನಿರೂಪಣೆ ಮಾಡಿದರು.






