
ರಾಜ್ಯದಲ್ಲಿ (Karnataka) ಈ ಹಿಂದೆ ತೀವ್ರ ಸಂಚಲನ ಸೃಷ್ಟಿಸಿದ್ದ ಭ್ರೂಣ ಹತ್ಯೆ (Foeticide) ಭೂತ ಮತ್ತೆ ಆವರಿಸಿದ್ದು, ಈ ಸಂಬಂಧ ಮೈಸೂರಿನ (Mysuru) ಐಷಾರಾಮಿ ಮನೆ ಮೇಲೆ ಕಾರ್ಯಚರಣೆ ನಡೆಸಲಾಗಿದೆ.
ಮೈಸೂರಿನ ಹುನಗನಹಳ್ಳಿಯಲ್ಲಿ ಕಾರ್ಯನಿರ್ವಹಿಸುತ್ತಿದ್ದ ಭ್ರೂಣ ಹತ್ಯೆ ಕೇಂದ್ರದ ಮೇಲೆ ಆರೋಗ್ಯ ಇಲಾಖೆ ಅಧಿಕಾರಿಗಳು ಕಾರ್ಯಾಚರಣೆ ನಡೆಸಿ ಅಕ್ರಮಕ್ಕೆ ಬ್ರೇಕ್ ಹಾಕಿದ್ದಾರೆ.
ಸಂಬಂಧ ಓರ್ವ ಮಹಿಳೆ ಸೇರಿ ಮೂವರನ್ನು ವಶಕ್ಕೆ ಪಡೆಯಲಾಗಿದೆ. ಬನ್ನೂರಿನ ಪ್ರತಿಷ್ಠಿತ ನರ್ಸಿಂಗ್ ಹೋಂ ಸಿಬ್ಬಂದಿ ಕೈವಾಡ ಶಂಕೆ ಕೂಡ ವ್ಯಕ್ತವಾಗಿದ್ದು, ವರುಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಕಳೆದ ಅನೇಕ ತಿಂಗಳಿಂದ ತೋಟಗಳ ಮಧ್ಯೆ ಇರೋ ಐಶಾರಾಮಿ ಬಂಗಲೆಯಲ್ಲಿ ಭ್ರೂಣ ಲಿಂಗ ಪತ್ತೆ ಹಾಗೂ ಹತ್ಯೆ ಮಾಡಲಾಗುತ್ತಿತ್ತು ಎಂಬ ಆರೋಪ ಕೇಳಿಬಂದಿದೆ. ಹೆಣ್ಣು ಭ್ರೂಣವಾದರೆ ಅದರ ಹತ್ಯೆಗೆ 30 ಸಾವಿರ ರೂ ಹಣ ನಿಗದಿ ಮಾಡಲಾಗಿತ್ತು. ಖಾಸಗಿ ಆಸ್ಪತ್ರೆ ಆಡಳಿತ ಮಂಡಳಿ ಇದರಲ್ಲಿ ಭಾಗಿಯಾಗಿರೋ ಬಗ್ಗೆ ಅನುಮಾನ ವ್ಯಕ್ತವಾಗಿದೆ. ದಾಳಿ ವೇಳೆ ಇಬ್ಬರು ಗರ್ಭಿಣಿಯರು ಮನೆಯಲ್ಲಿ ಪಟ್ಟೆಯಾಗಿದ್ದಾರೆ.
ಮೈಸೂರು ಹಾಗೂ ಮಂಡ್ಯ ಭಾಗದ ಹಿರಿಯ ಅಧಿಕಾರಿಗಳು ಕಾರ್ಯಾಚರಣೆಯಲ್ಲಿ ಭಾಗಿಯಾಗಿದ್ದು, ಮನೆಯ ಲಾಕರ್ ನಲ್ಲಿದ್ದ 3 ಲಕ್ಷ ಹಣ ಹಾಗೂ ವೈದ್ಯಕೀಯ ಪರಿಕರಗಳನ್ನು ವಶಕ್ಕೆ ಪಡೆಯಲಾಗಿದೆ. ಇನ್ನೂ ಅವೈಜ್ಞಾನಿಕವಾಗಿ ಔಷಧಿಗಳನ್ನು ಮನೆಯ ಮುಂದೆಯೇ ವಿಲೇವಾರಿ ಮಾಡಲಾಗಿರೋದು ಸಹ ಕಂಡುಬಂದಿದ್ದು, ಕೆಲ ವಸ್ತುಗಳನ್ನ ಅಲ್ಲೇ ಸುಟ್ಟು ಹಾಕಲಾಗಿತ್ತು ಎನ್ನಲಾಗಿದೆ. ಸದ್ಯ ಮೂವರನ್ನು ಬಂಧಿಸಿರೋ ಪೊಲೀಸರು ಹೆಚ್ಚಿನ ತನಿಖೆ ಕೈಗೊಂಡಿದ್ದಾರೆ.






