
ನವೆಂಬರ್ 22ರ ವಾರಾಂತ್ಯದ ಸುಮಾರಿಗೆ ಬಂಗಾಳಕೊಲ್ಲಿಯಲ್ಲಿ ವಾಯುಭಾರ ಕುಸಿತದಿಂದ ರಾಜ್ಯಾದ್ಯಂತ ಮಳೆ ಮತ್ತೆ ಚುರುಕಾಗುವ ನಿರೀಕ್ಷೆಯಿದೆ. ದಕ್ಷಿಣ ಒಳನಾಡಿನಲ್ಲಿ ನ.18 ರಿಂದ 22ರವರೆಗೆ ಮಳೆಯಾಗಲಿದ್ದು, ರಾತ್ರಿ ತಾಪಮಾನ ಏರಿಕೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಹೇಳಿದೆ.
ಈಗಿರುವ ಹವಾಮಾನ ಸ್ಥಿತಿಯಲ್ಲಿ ನೈಋತ್ಯ ಬಂಗಾಳಕೊಲ್ಲಿ ಮತ್ತು ಶ್ರೀಲಂಕಾ ಕರಾವಳಿಯಲ್ಲಿದ್ದ ವಾಯುಭಾರ ಕುಸಿತವು ಪ್ರಸ್ತುತ ಕೊಮೊರಿಯನ್ ಪ್ರದೇಶದ ಮೇಲೆ ಕೇಂದ್ರೀಕೃತವಾಗಿದೆ. ಹೀಗಾಗಿ ದಕ್ಷಿಣ ಒಳನಾಡಿನ ಕೆಲವೆಡೆ ನ.18 ರಿಂದ 22 ರವರೆಗೆ ಹಗುರ ಮಳೆಯಾಗಲಿದೆ. ಉತ್ತರ ಒಳನಾಡು ಹಾಗೂ ಕರಾವಳಿ ಜಿಲ್ಲೆಗಳಲ್ಲಿ ನವೆಂಬರ್ 18 ರಿಂದ ನ.22 ರವರೆಗೆ ಒಣಹವೆ ಇರಲಿದೆ. ಉತ್ತರ ಹಾಗೂ ದಕ್ಷಿಣ ಒಳನಾಡಿನ ಜಿಲ್ಲೆಗಳಲ್ಲಿ ರಾತ್ರಿಯ ವೇಳೆ ಉಷ್ಣಾಂಶ ಏರಿಕೆಯಾಗುವ ಸಾಧ್ಯತೆ ಇದೆ ಎಂದು ವಿಜ್ಞಾನಿ ಸಿಎಸ್ ಪಾಟೀಲ್ ತಿಳಿಸಿದ್ದಾರೆ.
ನವೆಂಬರ್ 18-19ರಂದು ದಕ್ಷಿಣ ಒಳನಾಡು- ಬೆಂಗಳೂರು ಗ್ರಾಮಾಂತರ, ಬೆಂಗಳೂರು ನಗರ, ಕೋಲಾರ, ಚಿಕ್ಕಬಳ್ಳಾಪುರ, ಚಾಮರಾಜನಗರ ಮತ್ತು ಮೈಸೂರು ಜಿಲ್ಲೆಗಳ ಒಂದೆರಡು ಕಡೆಗಳಲ್ಲಿ ಹಗುರ ಮಳೆಯಾಗುವ ಸಾಧ್ಯತೆಯಿದೆ. ಉಳಿದಂತೆ ಬಳ್ಳಾರಿ, ಚಿಕ್ಕಮಗಳೂರು, ಚಿತ್ರದುರ್ಗ, ದಾವಣಗೆರೆ, ಹಾಸನ, ಕೊಡಗು, ಮಂಡ್ಯ, ರಾಮನಗರ, ಶಿವಮೊಗ್ಗ, ತುಮಕೂರು ಮತ್ತು ವಿಜಯನಗರ ಜಿಲ್ಲೆಗಳಲ್ಲಿ ಒಣಹವೆ ಮುಂದುವರಿಯಲಿದೆ ಎಂದು ಇಲಾಖೆ ತಿಳಿಸಿದೆ.









