
ಮಂಗಳೂರು: ನಗರದ ವಿವಿಧ ಠಾಣೆಗಳಲ್ಲಿ ನಡೆದಿದ್ದ ಸರ ಕಸಿದುಕೊಳ್ಳುವುದು ಹಾಗೂ ದ್ವಿಚಕ್ರ ವಾಹನ ಕಳವು ಪ್ರಕರಣಗಳನ್ನು ಪತ್ತೆ ಹಚ್ಚುವಲ್ಲಿ ಮಂಗಳೂರು ನಗರ ಪೊಲೀಸರು ದೊಡ್ಡ ಯಶಸ್ಸು ಸಾಧಿಸಿದ್ದಾರೆ. ವಯೋವೃದ್ಧರನ್ನು ಗುರಿಯಾಗಿಸಿಕೊಂಡು ಸರಗಳ್ಳತನ ನಡೆಸುತ್ತಿದ್ದ ಅಂತರ್‌ರಾಜ್ಯ ಕುಖ್ಯಾತ ಆರೋಪಿಯನ್ನು ಬಂಧಿಸಲಾಗಿದೆ.
ನವೆಂಬರ್ 21ರಂದು ಕದ್ರಿ ಬಟ್ಟಗುಡ್ಡೆಯಲ್ಲಿ 83 ವರ್ಷದ ಮಹಿಳೆಯ ಚಿನ್ನದ ಸರ ಕಸಿದುಕೊಂಡು ಪರಾರಿಯಾಗಿದ್ದ ಪ್ರಕರಣ ತನಿಖೆಯಲ್ಲಿದ್ದು, ಈ ಹಿನ್ನೆಲೆಯಲ್ಲಿ ವಿಶೇಷ ತಂಡವನ್ನು ರಚಿಸಲಾಗಿತ್ತು.
ಡಿಸೆಂಬರ್ 4ರಂದು ಕದ್ರಿ ಜೋಗಿಮಠದ ಬಳಿ ಪೊಲೀಸರು ನಡೆಸಿದ ವಾಹನ ತಪಾಸಣೆಯಲ್ಲಿ KA19 HC 6946 ಸಂಖ್ಯೆಯ ದ್ವಿಚಕ್ರ ವಾಹನದಲ್ಲಿ ಸಂಚರಿಸುತ್ತಿದ್ದ ವ್ಯಕ್ತಿಯನ್ನು ಶಂಕೆ ಆಧಾರವಾಗಿ ತಡೆದು ಪರಿಶೀಲಿಸಿದಾಗ, ಅದು ಸುರತ್ಕಲ್ ಠಾಣೆ ವ್ಯಾಪ್ತಿಯಲ್ಲಿ ಕಳವು ಮಾಡಲ್ಪಟ್ಟ ವಾಹನವೆಂಬುದು ಪತ್ತೆಯಾಯಿತು. ವಿಚಾರಣೆಗಿಳಿದಾಗ ಆರೋಪಿ ಹಲವು ಸರಗಳ್ಳತನ ಹಾಗೂ ವಾಹನ ಕಳವು ಪ್ರಕರಣಗಳಲ್ಲಿ ನೇರ ಸಂಬಂಧ ಹೊಂದಿರುವುದು ಬೆಳಕಿಗೆ ಬಂತು.
ಬಂಧಿತ ಆರೋಪಿ
ಆದಿತ್ ಗೋಪಾನ್ @ ಮುತ್ತು ಕೃಷ್ಣ (32)
ವಾಸ: ವೆಲ್ಲಟ್ಟಿ ವೀಡು, ವಲಿಯರ್ತಲ, ತಿರುವನಂತಪುರಂ, ಕೇರಳ.
ತನಿಖೆಯಲ್ಲಿ ಆರೋಪಿ ಈ ಕೆಳಗಿನ ಪ್ರಕರಣಗಳಲ್ಲಿ ಭಾಗಿಯಾಗಿರುವುದು ದೃಢಪಟ್ಟಿದೆ:
• 21-11-2025 – ಕದ್ರಿ ಬಟ್ಟಗುಡ್ಡೆಯಲ್ಲಿ 1.5 ಪವನ್ ಚಿನ್ನದ ಸರ ಸುಲಿಗೆ
• 27-09-2025 – ಮುಲ್ಕಿ ಕೋಟೆಕೇರಿಯಲ್ಲಿ ಒಂಟಿ ಮಹಿಳೆಯಿಂದ 2 ಪವನ್ ಚಿನ್ನದ ಸರ ದೋಚಿಕೆ
• ಬೈಂದೂರು, ಕುಂದಾಪುರ, ಸುರತ್ಕಲ್ (2 ಪ್ರಕರಣ) – ದ್ವಿಚಕ್ರ ವಾಹನ ಕಳವು
ಒಟ್ಟು 4 ದ್ವಿಚಕ್ರ ವಾಹನಗಳು ಮತ್ತು 5 ಲಕ್ಷ ರೂ. ಮೌಲ್ಯದ ಚಿನ್ನಾಭರಣ ಸೇರಿ ಕಳವಾದ ಸೊತ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ.
ಆರೋಪಿಯ ವಿರುದ್ಧ ತಮಿಳುನಾಡಿನ ನಾಗರಕೋಯಿಲ್ ಸೇರಿದಂತೆ ಹಲವು ಕಡೆ ಮನೆಗಳಿಗೆ ಹೊಂಚು ಹಾಕಿದ ಕಳವು ಪ್ರಕರಣಗಳು ದಾಖಲಾಗಿದ್ದು, ಜೈಲುವಾಸ ಅನುಭವಿಸಿ ಬಿಡುಗಡೆಯಾದ ನಂತರ ರೈಲು ಪ್ರಯಾಣದ ಮೂಲಕ ದೇಶದ ವಿವಿಧ ಕಡೆ ಸಂಚರಿಸಿ ದ್ವಿಚಕ್ರ ವಾಹನ ಕಳವು ಹಾಗೂ ಸರಗಳ್ಳತನ ಮಾಡುತ್ತಿದ್ದನೆಂಬುದು ಪತ್ತೆಯಾಗಿದೆ.
ಮಂಗಳೂರು ಪೂರ್ವ ಠಾಣೆಯ ನಿರೀಕ್ಷಕ ಅನಂತ ಪದ್ಮಾನಾಭ ಹಾಗೂ ಕದ್ರಿ ಠಾಣೆಯ ಸಿಬ್ಬಂದಿಗಳು ಈ ಬೃಹತ್ ಕಾರ್ಯಾಚರಣೆಯಲ್ಲಿ ಪ್ರಮುಖ ಪಾತ್ರವಹಿಸಿದ್ದಾರೆ.
2025ರಲ್ಲಿ ನಗರ ವ್ಯಾಪ್ತಿಯಲ್ಲಿ ನಡೆದ 72 ದ್ವಿಚಕ್ರ ವಾಹನ ಕಳವು ಪ್ರಕರಣಗಳಲ್ಲಿ 57 ಪ್ರಕರಣಗಳನ್ನು ಪತ್ತೆ ಮಾಡಲಾಗಿದ್ದು, ಶೇಕಡಾ 79ರಷ್ಟು ಸೊತ್ತು ಮರುಸ್ವಾಧೀನವಾಗಿದೆ ಎಂದು ಪೊಲೀಸ್ ಆಯುಕ್ತರು ತಿಳಿಸಿದ್ದಾರೆ.






