ಮಂಗಳೂರು, ಡಿ.13: ಬೆಂಗಳೂರಿನಿಂದ ಮಂಗಳೂರಿನ ಡ್ರಗ್ ಪೆಡ್ಲರ್‌ಗಳಿಗೆ ಮಾದಕ ವಸ್ತು MDMA ಸರಬರಾಜು ಮಾಡುತ್ತಿದ್ದ ತಂಡವನ್ನು ಮಂಗಳೂರು ನಗರ ಸಿಸಿಬಿ ಘಟಕದ ಪೊಲೀಸರು ಬಂಧಿಸಿದ್ದಾರೆ. ಅರ್ಕುಳ ಬಳಿ ಕಾರಿನಲ್ಲಿ ಸಾಗುತ್ತಿದ್ದ ವೇಳೆ ಅಹಮ್ಮದ್ ಶಾಬೀತ್ ಹಾಗೂ ಆತನ ತಂಡವನ್ನು ವಶಕ್ಕೆ ಪಡೆದು ದಸ್ತಗಿರಿ ಮಾಡಲಾಗಿದೆ.

ಬಂಧಿತ ಆರೋಪಿಗಳ ವಿವರ ಹೀಗಿದೆ: ಅಹಮ್ಮದ್ ಶಾಬೀತ್ (35), ಎಸ್. ಅಬ್ದುಲ್ ರಜಾಕ್ ಅವರ ಪುತ್ರ, ಮೂಲತಃ ಮಲ್ಲೂರು ಗ್ರಾಮದ ನಿವಾಸಿ, ಪ್ರಸ್ತುತ ಕೈಕಂಬ, ಬಿ.ಸಿ.ರೋಡ್‌ನಲ್ಲಿ ವಾಸ; ಮಹಮ್ಮದ್ ಶಂಶೀರ್ (36), ಎಸ್. ಅಹಮ್ಮದ್ ಅವರ ಪುತ್ರ, ಬಂಟ್ವಾಳ ತಾಲೂಕಿನ ಬಿ. ಮೂಡ ಗ್ರಾಮದ ನಿವಾಸಿ; ಹಾಗೂ ನೌಶೀನ (27), ಉಮರಬ್ಬ ಅವರ ಪುತ್ರಿ, ಬಂಟ್ವಾಳ ತಾಲೂಕಿನ ಸರಪಾಡಿ ಗ್ರಾಮದ ನಿವಾಸಿ.

ಆರೋಪಿಗಳಿಂದ 90 ಗ್ರಾಂ MDMA ಮಾದಕ ವಸ್ತು, KL-58-W-6342 ಸಂಖ್ಯೆಯ ಬಿಳಿ ಬಣ್ಣದ ಮಾರುತಿ ಸ್ವಿಫ್ಟ್ ಕಾರು ಹಾಗೂ ಮೊಬೈಲ್ ಫೋನ್‌ಗಳನ್ನು ವಶಪಡಿಸಿಕೊಳ್ಳಲಾಗಿದೆ.

ಪೊಲೀಸರ ತನಿಖೆಯಲ್ಲಿ ಅಹಮ್ಮದ್ ಶಾಬೀತ್ ನಿರಂತರವಾಗಿ ಬೆಂಗಳೂರಿನಿಂದ MDMA ತರಿಸಿ ಮಂಗಳೂರಿನ ಡ್ರಗ್ ಪೆಡ್ಲರ್‌ಗಳಿಗೆ ಸರಬರಾಜು ಮಾಡುತ್ತಿದ್ದಾನೆ ಎಂಬುದು ಬೆಳಕಿಗೆ ಬಂದಿದೆ. ಯಾರಿಗೂ ಅನುಮಾನ ಬರದಂತೆ ಮಹಿಳೆಯನ್ನು ಜೊತೆಗಿರಿಸಿಕೊಂಡು ಮಾದಕ ವಸ್ತು ಸಾಗಾಟ ನಡೆಸುತ್ತಿದ್ದುದಾಗಿ ತಿಳಿದುಬಂದಿದೆ. ಖಚಿತ ಮಾಹಿತಿಯ ಮೇರೆಗೆ ಸಿಸಿಬಿ ಘಟಕದ ಅಧಿಕಾರಿಗಳು ಕಾರ್ಯಾಚರಣೆ ನಡೆಸಿ ಆರೋಪಿಗಳನ್ನು ಬಂಧಿಸಿದ್ದಾರೆ.

ಈ ಸಂಬಂಧ ಕಂಕನಾಡಿ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಆರೋಪಿಗಳನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ. ನ್ಯಾಯಾಂಗ ಬಂಧನ ವಿಧಿಸಲಾಗಿದ್ದು, ತನಿಖೆ ಮುಂದುವರಿದಿದೆ ಎಂದು ಪೊಲೀಸರು ತಿಳಿಸಿದ್ದಾರೆ.

Leave a Reply

Your email address will not be published. Required fields are marked *

Join WhatsApp Group
error: Content is protected !!