ಬಂಟ್ವಾಳ, ಡಿ.13: ಯಾವುದೇ ಪರವಾನಿಗೆ ಇಲ್ಲದೆ ಜಾನುವಾರನ್ನು ಅಕ್ರಮವಾಗಿ ಸಾಗಾಟ ಮಾಡುತ್ತಿದ್ದ ಪ್ರಕರಣವನ್ನು ಪುಂಜಾಲಕಟ್ಟೆ ಪೊಲೀಸ್ ಠಾಣೆ ಪೊಲೀಸರು ಪತ್ತೆಹಚ್ಚಿದ್ದಾರೆ. ಮಣಿನಾಲ್ಕೂರು–ತೆಕ್ಕಾರು ರಸ್ತೆಯಲ್ಲಿ ಗೂಡ್ಸ್ ಅಟೋದಲ್ಲಿ ಜಾನುವಾರು ಸಾಗಿಸಲಾಗುತ್ತಿದೆ ಎಂಬ ಖಚಿತ ಮಾಹಿತಿ ಮೇರೆಗೆ ಪೊಲೀಸರು ದಾಳಿ ನಡೆಸಿದ್ದಾರೆ.

ಡಿ.13ರಂದು ಸಂಜೆ ಪೊಲೀಸ್ ಉಪನಿರೀಕ್ಷಕರು ಸಿಬ್ಬಂದಿಯೊಂದಿಗೆ ಕಾರ್ಯಾಚರಣೆ ನಡೆಸಿ KA-70-8686 ಸಂಖ್ಯೆಯ ಗೂಡ್ಸ್ ಅಟೋವನ್ನು ತಡೆದು ಪರಿಶೀಲಿಸಿದಾಗ, ಒಂದು ಜಾನುವಾರನ್ನು ಹಗ್ಗದಿಂದ ಹಿಂಸಾತ್ಮಕವಾಗಿ ಕಟ್ಟಿ ಸಾಗಿಸಲಾಗುತ್ತಿದ್ದುದನ್ನು ಕಂಡುಹಿಡಿದಿದ್ದಾರೆ. ವಾಹನದ ಚಾಲಕ ಶ್ರೀಧರ ಪೂಜಾರಿ (56), ಮಣಿನಾಲ್ಕೂರು ಗ್ರಾಮದ ನಿವಾಸಿ ಎಂದು ಗುರುತಿಸಲಾಗಿದೆ.

ಪೊಲೀಸರ ತನಿಖೆಯಲ್ಲಿ, ಬಂಟ್ವಾಳ ಸರಪ್ಪಾಡಿಯ ಭೋಜ ಮೂಲ್ಯ ಎಂಬವರ ಮನೆಯಿಂದ ಯಾವುದೇ ದಾಖಲೆ ಅಥವಾ ಪರವಾನಿಗೆ ಇಲ್ಲದೆ ಜಾನುವಾರನ್ನು ಗೋಹತ್ಯೆ ಮಾಡಿ ಮಾಂಸ ಮಾಡುವ ಉದ್ದೇಶದಿಂದ ಸಾಗಾಟ ಮಾಡಲಾಗುತ್ತಿತ್ತು ಎಂಬುದು ಬೆಳಕಿಗೆ ಬಂದಿದೆ.

ಮುಂದಿನ ಕಾನೂನು ಕ್ರಮಕ್ಕಾಗಿ ಜಾನುವಾರು, ಗೂಡ್ಸ್ ಅಟೋ ಹಾಗೂ ಒಂದು ಮೊಬೈಲ್ ಫೋನ್ ಅನ್ನು ವಶಕ್ಕೆ ಪಡೆದು, ಆರೋಪಿಗಳ ವಿರುದ್ಧ ಪುಂಜಾಲಕಟ್ಟೆ ಪೊಲೀಸ್ ಠಾಣೆಯಲ್ಲಿ ಅ.ಕ್ರ. 85/2025 ಅಡಿಯಲ್ಲಿ ಕರ್ನಾಟಕ ಗೋಹತ್ಯೆ ನಿಷೇಧ ಕಾಯಿದೆ ಹಾಗೂ ಜಾನುವಾರು ಸಂರಕ್ಷಣಾ ಕಾಯಿದೆ–2020ರ ಕಲಂ 5, 7, 12 ಮತ್ತು ಪ್ರಾಣಿ ಹಿಂಸೆ ತಡೆ ಕಾಯಿದೆ ಕಲಂ 11(1)(ಡಿ) ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ.

ಮುಂದುವರಿದ ಕ್ರಮವಾಗಿ, ಆರೋಪಿತ ಭೋಜ ಮೂಲ್ಯ ಅವರಿಗೆ ಸೇರಿದ ಮನೆ ಹಾಗೂ ಅದಕ್ಕೆ ಹೊಂದಿಕೊಂಡಿರುವ ಜಾನುವಾರು ಕೊಟ್ಟಿಗೆ ಸೇರಿದಂತೆ ಆವರಣವನ್ನು ಕಾನೂನು ಪ್ರಕ್ರಿಯೆಯಂತೆ ಜಪ್ತಿ ಮಾಡಲಾಗಿದೆ. ಪ್ರಕರಣದ ತನಿಖೆ ಮುಂದುವರಿದಿದೆ ಎಂದು ಪೊಲೀಸರು ತಿಳಿಸಿದ್ದಾರೆ.

Leave a Reply

Your email address will not be published. Required fields are marked *

Join WhatsApp Group
error: Content is protected !!