
ಮಂಗಳೂರು: ತಲ್ವಾರ್ ಹಿಡಿದು ಹಾಡಿಗೆ ನೃತ್ಯ ಮಾಡುವ ರೀಲ್ಸ್ ವಿಡಿಯೋವನ್ನು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿ ಸಾರ್ವಜನಿಕರಲ್ಲಿ ಭೀತಿ ಹುಟ್ಟಿಸಿದ ಆರೋಪದ ಮೇಲೆ ಇಬ್ಬರನ್ನು ಕಾವೂರು ಪೊಲೀಸರು ಬಂಧಿಸಿದ್ದಾರೆ.
ಡಿಸೆಂಬರ್ 13ರಂದು ‘Suresh Psy’ ಎಂಬ ಫೇಸ್‌ಬುಕ್ ಖಾತೆಯಲ್ಲಿ, ಅಮೀರ್ ಸುಹೇಲ್ ಎಂಬಾತ ತಲ್ವಾರ್ ಹಿಡಿದು ನೃತ್ಯ ಮಾಡಿದ ವಿಡಿಯೋವನ್ನು ‘ವೈಬ್ಸ್’ ಹಾಗೂ ಬಿಳಿ ಬಣ್ಣದ ಹೃದಯ ಚಿಹ್ನೆಯೊಂದಿಗೆ ಸ್ಟೋರಿಯಾಗಿ ಹಂಚಿಕೊಳ್ಳಲಾಗಿತ್ತು. ಈ ಕೃತ್ಯ ಸಾರ್ವಜನಿಕರಲ್ಲಿ ಆತಂಕ ಉಂಟುಮಾಡುವಂತಿತ್ತು ಎಂದು ಪೊಲೀಸರು ತಿಳಿಸಿದ್ದಾರೆ.
ಈ ಸಂಬಂಧ ಕಾವೂರು ಪೊಲೀಸ್ ಠಾಣೆಯಲ್ಲಿ ಅಪರಾಧ ಕ್ರಮಾಂಕ 188/2025 ಅಡಿಯಲ್ಲಿ ಭಾರತೀಯ ನ್ಯಾಯ ಸಂಹಿತೆ–2023ರ ಕಲಂ 352(2), ಭಾರತೀಯ ಶಸ್ತ್ರಾಸ್ತ್ರ ಕಾಯ್ದೆಯ 25(1ಬಿ) ಹಾಗೂ ಐಟಿ ಕಾಯ್ದೆಯ 66 ಕಲಂನಡಿ ಪ್ರಕರಣ ದಾಖಲಿಸಲಾಗಿದೆ.
ಪ್ರಕರಣಕ್ಕೆ ಸಂಬಂಧಿಸಿ ಡಿಸೆಂಬರ್ 13ರಂದು ಅಮೀರ್ ಸುಹೇಲ್ ಹಾಗೂ ಸುರೇಶ ಅವರನ್ನು ಬಂಧಿಸಲಾಗಿದ್ದು, ರೀಲ್ಸ್‌ಗೆ ಬಳಸಿದ ತಲ್ವಾರ್ ಮತ್ತು ವಿಡಿಯೋ ಹಂಚಿಕೆಗೆ ಬಳಸಿದ ಮೊಬೈಲ್ ಫೋನ್‌ಗಳನ್ನು ವಶಪಡಿಸಿಕೊಳ್ಳಲಾಗಿದೆ.
ಬಂಧಿತರ ವಿವರ:
ಅಮೀರ್ ಸುಹೇಲ್ (28), ತಂದೆ: ದಿ. ಉಮ್ಮರ್, ಅಮೀನ್‌ಉಲ್ಲಾ, 1ನೇ ಮಹಡಿ, ಜೆ.ಡಂ ರೋಡ್, ಬಂದರು, ಮಂಗಳೂರು.
ಸುರೇಶ (29), ತಂದೆ: ದಿ. ರಮೇಶ್, 2-19/30, ಧನುಷ್ ಗೌಂಡ್ ಬಳಿ, ಉರುಂದಾಡಿಗುಡ್ಡೆ, ಕಾವೂರು, ಮಂಗಳೂರು.
ಮಂಗಳೂರು ಉತ್ತರ ಉಪವಿಭಾಗದ ಎಸಿಪಿ ಶ್ರೀಕಾಂತ್ ಕೆ. ಅವರ ಮಾರ್ಗದರ್ಶನದಲ್ಲಿ, ಕಾವೂರು ಪೊಲೀಸ್ ಠಾಣೆಯ ಪೊಲೀಸ್ ನಿರೀಕ್ಷಕ ರಾಘವೇಂದ್ರ ಎಂ. ಬೈಂದೂರು ನೇತೃತ್ವದಲ್ಲಿ, ಉಪನಿರೀಕ್ಷಕ ಮಲ್ಲಿಕಾರ್ಜುನ ಬಿರಾದಾರ ಹಾಗೂ ಸಿಬ್ಬಂದಿಗಳಾದ ಸಂಭಾಜಿ ಕದಂ, ಕೆಂಚನಗೌಡ, ಶರಣಪ್ಪ, ರಾಘವೇಂದ್ರ, ರಿಯಾಜ್ ಅವರು ಆರೋಪಿಗಳನ್ನು ಪತ್ತೆಹಚ್ಚಿ ಬಂಧಿಸಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.






