ಕಡಬ ತಾಲೂಕಿನ ಬಿಳಿನೆಲೆ ಗ್ರಾಮದ ನೆಟ್ಟಣದಲ್ಲಿರುವ ಬಾರ್‌ನಲ್ಲಿ ಕಾರ್ಯನಿರ್ವಹಿಸುತ್ತಿದ್ದ ನೌಕರನೊಬ್ಬ ಮಾಲೀಕರಿಗೆ ಲಕ್ಷಾಂತರ ರೂಪಾಯಿ ನಷ್ಟ ಉಂಟುಮಾಡಿ ಪರಾರಿಯಾದ ಘಟನೆ ಬೆಳಕಿಗೆ ಬಂದಿದೆ.
ಈ ಸಂಬಂಧ ಬಿಳಿನೆಲೆ ಗ್ರಾಮದ ನಿವಾಸಿ ವಿಶಾಲ್ ಸ್ಟೀಫನ್ (25) ಅವರು ಕಡಬ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ದೂರುದಾರರ ತಾಯಿಗೆ ಸೇರಿದ ಬಾರ್‌ನಲ್ಲಿ ಕಳೆದ ಸುಮಾರು ಏಳು ವರ್ಷಗಳಿಂದ ಕಡಬ ಹುಂಚಪ್ಪಡಿ ನಿವಾಸಿ ಹರ್ಷಿತ್ ಬಿ.ಕೆ. ಎಂಬಾತನು ಕೆಲಸ ಮಾಡುತ್ತಿದ್ದು, ದಿನನಿತ್ಯದ ಹಣಕಾಸು ವ್ಯವಹಾರ, ಸ್ಟಾಕ್ ನಿರ್ವಹಣೆ ಹಾಗೂ ಮೇಲ್ವಿಚಾರಣೆಯ ಜವಾಬ್ದಾರಿಯನ್ನು ವಹಿಸಿಕೊಂಡಿದ್ದನು.
ಡಿಸೆಂಬರ್ 21ರಂದು ರಾತ್ರಿ ಬಾರ್‌ನ ಲೆಕ್ಕಪತ್ರ ಪರಿಶೀಲನೆ ನಡೆಸಿದ ವೇಳೆ ವ್ಯವಹಾರದಲ್ಲಿ ವ್ಯತ್ಯಯ ಕಂಡುಬಂದಿದ್ದು, ಈ ಬಗ್ಗೆ ವಿಚಾರಿಸಿದಾಗ ಮರುದಿನ ಎಲ್ಲವೂ ಸರಿಯಾಗುತ್ತದೆ ಹಾಗೂ ಹಣವನ್ನು ಬ್ಯಾಂಕಿಗೆ ಜಮೆ ಮಾಡುವುದಾಗಿ ಆರೋಪಿತ ಭರವಸೆ ನೀಡಿದ್ದನು. ಆದರೆ ಡಿಸೆಂಬರ್ 22ರಂದು ಹಣ ಜಮೆಯಾಗದೆ ಇರುವುದರಿಂದ ಆರೋಪಿಯ ವಾಸದ ಕೊಠಡಿಗೆ ತೆರಳಿದಾಗ ಆತ ಅಲ್ಲಿಂದ ನಾಪತ್ತೆಯಾಗಿರುವುದು ಕಂಡುಬಂದಿದೆ.
ಮುಂದಿನ ಪರಿಶೀಲನೆಯಲ್ಲಿ, ಸ್ಟಾಕ್ ರೂಮ್‌ನಲ್ಲಿ ಇದ್ದ ಸುಮಾರು ₹6,57,104 ಮೌಲ್ಯದ ಮದ್ಯವನ್ನು ಆರೋಪಿಯು ಮುಂಚಿತವಾಗಿಯೇ ಮಾರಾಟ ಮಾಡಿ, ಆ ಮೊತ್ತವನ್ನು ಬ್ಯಾಂಕಿಗೆ ಜಮೆ ಮಾಡದೆ ವಂಚಿಸಿರುವುದು ಹಾಗೂ ಡಿಸೆಂಬರ್ 21ರಂದು ವ್ಯಾಪಾರದ ನಗದನ್ನು ಕಳವು ಮಾಡಿಕೊಂಡು ಪರಾರಿಯಾಗಿರುವುದು ದೃಢಪಟ್ಟಿದೆ.
ಈ ಕುರಿತು ಕಡಬ ಪೊಲೀಸ್ ಠಾಣೆಯಲ್ಲಿ ಅ.ಕ್ರ. 94/2025 ಕಲಂ 303(2), 314, 316(4) ಭಾರತೀಯ ನ್ಯಾಯ ಸಂಹಿತೆ (BNS) ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಲಾಗುತ್ತಿದೆ.

Leave a Reply

Your email address will not be published. Required fields are marked *

Join WhatsApp Group
error: Content is protected !!