
ಪುತ್ತೂರು: ಆದರ್ಶ ವಿವಿಧೋದ್ದೇಶ ಸಹಕಾರ ಸಂಘದ 17ನೇ ಶಾಖೆಯ ಉದ್ಘಾಟನಾ ಕಾರ್ಯಕ್ರಮ ಜ.10ರಂದು ಈಶ್ವರಮಂಗಲದಲ್ಲಿ ನಡೆಯಲಿದೆ ಎಂದು ಸಂಘದ ಅಧ್ಯಕ್ಷ ಹಾಗೂ ಸಹಕಾರರತ್ನ ಸವಣೂರು ಕೆ. ಸೀತಾರಾಮ ರೈ ತಿಳಿಸಿದ್ದಾರೆ.
ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, 30,900 ಸದಸ್ಯರನ್ನು ಹೊಂದಿರುವ ಸಂಘವು ಪ್ರಸಕ್ತ ಸಾಲಿನಲ್ಲಿ ₹829.88 ಕೋಟಿ ವ್ಯವಹಾರ ನಡೆಸಿ ₹2.01 ಕೋಟಿ ಲಾಭ ಗಳಿಸಿದೆ. ಸಂಘದಲ್ಲಿ ಒಟ್ಟು ₹161 ಕೋಟಿ ಠೇವಣಿಗಳು, ₹143 ಕೋಟಿ ಸಾಲ ವಿತರಣೆ ಹಾಗೂ ₹3.44 ಕೋಟಿ ಪಾಲು ಬಂಡವಾಳವಿದೆ ಎಂದು ವಿವರಿಸಿದರು.
ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯ ಅತ್ಯುತ್ತಮ ಸಹಕಾರ ಸಂಘ ಹಾಗೂ ಉತ್ತಮ ವಿವಿಧೋದ್ದೇಶ ಸಹಕಾರ ಸಂಘ ಎಂಬ ಪ್ರಶಸ್ತಿಗೆ ಪಾತ್ರವಾಗಿರುವ ಸಂಘವು ಆರಂಭದಿಂದಲೂ ನಿರಂತರವಾಗಿ ‘ಎ’ ವರ್ಗದ ಆಡಿಟ್ ಶ್ರೇಯಾಂಕವನ್ನು ಕಾಪಾಡಿಕೊಂಡು ಬಂದಿದೆ. ಸದಸ್ಯರಿಗೆ ಶೇ.10ಕ್ಕಿಂತ ಅಧಿಕ ಡಿವಿಡೆಂಡ್ ನೀಡಿದ ಏಕೈಕ ಸಂಘವಾಗಿದ್ದು, 2024–25ನೇ ಸಾಲಿಗೆ ಶೇ.17 ಡಿವಿಡೆಂಡ್ ಘೋಷಿಸಲಾಗಿದೆ ಎಂದು ತಿಳಿಸಿದರು.
ಸಮಾಜಸೇವೆಯ ಭಾಗವಾಗಿ ಸಂಘವು ಈವರೆಗೆ ಸರಕಾರಿ ಶಾಲೆಗಳ 1,545 ಮಕ್ಕಳಿಗೆ ₹31.12 ಲಕ್ಷ ಮೌಲ್ಯದ ಉಚಿತ ಶಿಕ್ಷಣ ಸಹಾಯ ಹಾಗೂ ವಿದ್ಯಾನಿಧಿ ವಿತರಿಸಿದೆ ಎಂದರು.
ಪ್ರಸ್ತುತ ಪುತ್ತೂರು, ಸುಳ್ಯ, ಸುಬ್ರಹ್ಮಣ್ಯ, ವಿಟ್ಲ, ಉಜಿರೆ, ಕಡಬ, ಸವಣೂರು, ಸಾಲೆತ್ತೂರು, ಕುಂಬ್ರ, ಬೆಳ್ಳಾರೆ, ಪಂಜ, ಬೊಳುವಾರು, ಮಡಂತ್ಯಾರು, ಬಿ. ಸಿರೋಡ್ ಕಲ್ಲಡ್ಕ ಹಾಗೂ ಪಾಂಡೇಶ್ವರದಲ್ಲಿ ಶಾಖೆಗಳನ್ನು ಹೊಂದಿರುವ ಸಂಘದ 17ನೇ ಶಾಖೆ ಈಶ್ವರಮಂಗಲದ ಗಣೇಶ್ ಕಾಂಪ್ಲೆಕ್ಸ್‌ನ ಪ್ರಥಮ ಮಹಡಿಯಲ್ಲಿ ಲೋಕಾರ್ಪಣೆಗೊಳ್ಳಲಿದೆ.
ಉದ್ಘಾಟನಾ ಕಾರ್ಯಕ್ರಮ
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಪುತ್ತೂರು ಶಾಸಕ ಅಶೋಕ್ ಕುಮಾರ್ ರೈ ಕೋಡಿಂಬಾಡಿ ವಹಿಸಲಿದ್ದಾರೆ. ಮಾಜಿ ಸಂಸದ ನಳಿನ್ ಕುಮಾರ್ ಕಟೀಲ್ ಉದ್ಘಾಟನೆ ನೆರವೇರಿಸಲಿದ್ದಾರೆ.
ಭದ್ರತಾ ಕೊಠಡಿಯನ್ನು ಮಾಜಿ ಶಾಸಕ ಸಂಜೀವ ಮಠಂದೂರು, ಕಂಪ್ಯೂಟರ್ ವ್ಯವಸ್ಥೆಯನ್ನು ಕಾವು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ನನ್ಯ ಅಚ್ಯುತ ಮೂಡತ್ತಾಯ ಹಾಗೂ ಪ್ರಥಮ ಠೇವಣಿ ಪತ್ರವನ್ನು ದ.ಕ. ಜಿಲ್ಲಾ ಸಹಕಾರಿ ಯೂನಿಯನ್ ಅಧ್ಯಕ್ಷ ಶಶಿಕುಮಾರ್ ಬಾಲ್ಯೊಟ್ಟು ಬಿಡುಗಡೆ ಮಾಡಲಿದ್ದಾರೆ.
ದ.ಕ. ಜಿಲ್ಲಾ ಹಾಲು ಉತ್ಪಾದಕರ ಒಕ್ಕೂಟದ ನಿರ್ದೇಶಕ ಎಸ್.ಬಿ. ಜಯರಾಮ್ ರೈ ಬಳಜ್ಜ, ನೆಟ್ಟಣಿಗೆ–ಮುಡ್ನೂರು ಗ್ರಾಮ ಪಂಚಾಯತ್ ಅಧ್ಯಕ್ಷೆ ಪೌಝಿಯಾ ಇಬ್ರಾಹಿಂ ಕೆ. ಹಾಗೂ ಕಟ್ಟಡದ ಮಾಲಕ ಗಣೇಶ್ ರೈ ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ ಎಂದು ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಸಂಘದ ಉಪಾಧ್ಯಕ್ಷ ಎನ್. ಸುಂದರ ರೈ ಸವಣೂರು, ನಿರ್ದೇಶಕರಾದ ಅಶ್ವಿನ್ ಎಲ್. ಶೆಟ್ಟಿ, ಜೈರಾಜ್ ಭಂಡಾರಿ ನೊಣಾಲು, ಮಹಾಪ್ರಬಂಧಕ ವಸಂತ ಜಾಲಾಡಿ ಹಾಗೂ ಸಹಾಯಕ ಮಹಾಪ್ರಬಂಧಕ ಸುನಾದ್‌ರಾಜ್ ಶೆಟ್ಟಿ ಉಪಸ್ಥಿತರಿದ್ದರು.
ಸಂಘದ ಸಾಧನಾ ವಿಶೇಷತೆಗಳು
ಒಟ್ಟು ಠೇವಣಿಗಳು: ₹161 ಕೋಟಿ
ಒಟ್ಟು ಸಾಲ ವಿತರಣೆ: ₹143 ಕೋಟಿ
ಒಟ್ಟು ಶಾಖೆಗಳು: 16
ಒಟ್ಟು ದುಡಿಯುವ ಬಂಡವಾಳ: ₹172 ಕೋಟಿ
ಪಾಲು ಬಂಡವಾಳ: ₹3.44 ಕೋಟಿ
ಸದಸ್ಯರು: 30,900
ಆರಂಭದಿಂದಲೂ ಶೇ.10ಕ್ಕಿಂತ ಅಧಿಕ ಡಿವಿಡೆಂಡ್
2024–25 ಸಾಲಿನ ಡಿವಿಡೆಂಡ್: ಶೇ.17
ಆಡಿಟ್ ವರ್ಗೀಕರಣ: ಸತತ ‘ಎ’ ವರ್ಗ
1,545 ಸರಕಾರಿ ಶಾಲಾ ಮಕ್ಕಳಿಗೆ ₹31,12,900 ಸಹಾಯಧನ
ಶೀಘ್ರದಲ್ಲೇ ಕೊಡಗು ಮತ್ತು ಉಡುಪಿ ಜಿಲ್ಲೆಗಳವರೆಗೆ ವ್ಯಾಪ್ತಿ ವಿಸ್ತರಣೆ
“ಸಂಘಕ್ಕೆ 25 ವರ್ಷ ತುಂಬುವ ವೇಳೆಗೆ ಶಾಖೆಗಳ ವಿಸ್ತರಣೆ ಹಾಗೂ ₹200 ಕೋಟಿ ಠೇವಣಿ ಸಂಗ್ರಹಿಸುವ ಗುರಿ ಹೊಂದಿದ್ದೇವೆ. ಕೇಂದ್ರ ಕಚೇರಿಗೆ ಸ್ವಂತ ಕಟ್ಟಡ ನಿರ್ಮಾಣಕ್ಕಾಗಿ ₹1.29 ಕೋಟಿ ಮೌಲ್ಯದ 0.73 ಸೆಂಟ್ಸ್ ಭೂಮಿಯನ್ನು ಖರೀದಿಸಿದ್ದು, ₹5 ಕೋಟಿ ವೆಚ್ಚದ ಕೇಂದ್ರ ಕಚೇರಿ ಮತ್ತು ವಾಣಿಜ್ಯ ಮಳಿಗೆಗಳ ಕಾಮಗಾರಿ ಪ್ರಗತಿಯಲ್ಲಿದೆ. 25ನೇ ವರ್ಷದೊಳಗೆ ಕಟ್ಟಡವನ್ನು ಲೋಕಾರ್ಪಣೆ ಮಾಡಲಾಗುವುದು.”
— ಸವಣೂರು ಕೆ. ಸೀತಾರಾಮ ರೈ






