
ಪುತ್ತೂರು:ಆತ್ಮೀಯತೆ, ಅಧ್ಯಯನಶೀಲತೆ ಹಾಗೂ ಸಾಧನಾಶೀಲತೆಯ ಮೂಲಕ ಸಮಾಜಕ್ಕಾಗಿ ಬದುಕಿದವರು ನಕ್ಷತ್ರದಂತೆ ಮಿನುಗುತ್ತಾರೆ. ವಿವಿಧ ಕ್ಷೇತ್ರಗಳಲ್ಲಿ ತೊಡಗಿಸಿಕೊಂಡು ನಿರಂತರ ಕೊಡುಗೆ ನೀಡುತ್ತಿರುವ ಸವಣೂರು ಕೆ. ಸೀತಾರಾಮ ರೈ ಸಮಾಜಕ್ಕೆ ದಿಗ್ದರ್ಶನ ನೀಡುವ ವ್ಯಕ್ತಿ ಎಂದು ದಕ್ಷಿಣ ಕನ್ನಡ ಮಾಜಿ ಸಂಸದ ನಳಿನ್ ಕುಮಾರ್ ಕಟೀಲ್ ಹೇಳಿದರು.
ಆದರ್ಶ ವಿವಿಧೋದ್ದೇಶ ಸಹಕಾರ ಸಂಘದ ೧೭ನೇ ಶಾಖೆಯನ್ನು ಶನಿವಾರ ಈಶ್ವರಮಂಗಲದಲ್ಲಿ ಉದ್ಘಾಟಿಸಿ ಮಾತನಾಡಿದ ಅವರು, ಸಣ್ಣ ಗ್ರಾಮವಾದ ಸವಣೂರಿನಲ್ಲಿ ಶಿಕ್ಷಣ ಹಾಗೂ ಸಹಕಾರ ಕ್ಷೇತ್ರದಲ್ಲಿ ಕ್ರಾಂತಿಕಾರಿ ಬೆಳವಣಿಗೆ ಸಾಧ್ಯವಾಗಿರುವುದು ಸೀತಾರಾಮ ರೈ ಅವರ ದೂರದೃಷ್ಟಿಯ ಫಲ ಎಂದರು. ಅವರ ಚಿಂತನೆಗಳಿಂದ ಊರು ಬೆಳೆಯುವಂತಾಗಿದೆ ಎಂದು ಶ್ಲಾಘಿಸಿದರು.
ಪ್ರಧಾನಿ ನರೇಂದ್ರ ಮೋದಿ ಅವರು ಜನ್‌ಧನ್ ಖಾತೆ ಜಾರಿಗೊಳಿಸುವುದಕ್ಕೂ ಮುನ್ನವೇ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಶೇ.೮೦ರಷ್ಟು ಜನರಿಗೆ ಬ್ಯಾಂಕ್ ಖಾತೆಗಳಿದ್ದವು. ಇದಕ್ಕೆ ಸಹಕಾರಿ ಸಂಘಗಳೇ ಕಾರಣ. ದಕ್ಷಿಣ ಕನ್ನಡ ಜಿಲ್ಲೆ ಸಹಕಾರ ರಂಗದ ಕಾಶಿಯಾಗಿದೆ ಎಂದು ಕಟೀಲ್ ಹೇಳಿದರು. ಸಾಮಾನ್ಯ ಜನರಿಗೆ ಬ್ಯಾಂಕಿಂಗ್ ವ್ಯವಸ್ಥೆಯನ್ನು ಸಮೀಪಕ್ಕೆ ತಂದ ಶ್ರೇಯಸ್ಸು ಜನಾರ್ದನ ಪೂಜಾರಿ ಹಾಗೂ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಸಲ್ಲುತ್ತದೆ. ಆದರೆ ಆರ್ಥಿಕ ಶಿಕ್ಷಣವನ್ನು ಸಾಮಾನ್ಯರಿಗೆ ನೀಡಿರುವುದು ಸಹಕಾರಿ ಸಂಘಗಳೆಂದರು. ಉದ್ಯೋಗ ಸೃಷ್ಟಿಯಲ್ಲಿಯೂ ಕೋಆಪರೇಟಿವ್ ಸೊಸೈಟಿಗಳು ಮಹತ್ವದ ಪಾತ್ರ ವಹಿಸಿವೆ ಎಂದು ಹೇಳಿದರು.
ಭದ್ರತಾ ಕೊಠಡಿಯನ್ನು ಮಾಜಿ ಶಾಸಕ ಸಂಜೀವ ಮಠಂದೂರು ಉದ್ಘಾಟಿಸಿದರು. ಕಾವು ಪ್ರಾಥಮಿಕ ಕೃಷಿಪತ್ತಿನ ಸಹಕಾರ ಸಂಘದ ಅಧ್ಯಕ್ಷ ನನ್ಯ ಅಚ್ಯುತ ಮೂಡೆತ್ತಾಯ ಮಾತನಾಡಿ, ಸಹಕಾರದ ಆಗುಹೋಗುಗಳನ್ನು ಆಳವಾಗಿ ತಿಳಿದಿರುವ ಸೀತಾರಾಮ ರೈ ಅವರ ನೇತೃತ್ವದ ಆದರ್ಶ ಸೊಸೈಟಿ ತನ್ನ ಹೆಸರಿಗೆ ತಕ್ಕಂತೆ ಕಾರ್ಯನಿರ್ವಹಿಸುತ್ತಿದೆ ಎಂದರು. ದೇಶದಲ್ಲೇ ಏಕಸಮಾನ ಸಹಕಾರಿ ಬೈಲಾ ಹಾಗೂ ಸಾಫ್ಟ್‌ವೇರ್ ಅಳವಡಿಕೆಯಿಂದ ಸರ್ಕಾರದ ಮಾರ್ಗದರ್ಶನವೂ ಈ ಕ್ಷೇತ್ರಕ್ಕೆ ಲಭಿಸುತ್ತಿದೆ ಎಂದರು.
ನೆಟ್ಟಣಿಗೆ–ಮುಡ್ನೂರು ಗ್ರಾಮ ಪಂಚಾಯಿತಿ ಅಧ್ಯಕ್ಷೆ ಪೌಝಿಯಾ ಇಬ್ರಾಹಿಂ ಕೆ. ಮಾತನಾಡಿ, ಇಚ್ಛಾಶಕ್ತಿ ಹಾಗೂ ಸೇವಾ ಮನೋಭಾವದಿಂದ ಬ್ಯಾಂಕಿಂಗ್ ಕ್ಷೇತ್ರದಲ್ಲಿ ಪ್ರಗತಿ ಸಾಧ್ಯ. ಜನಸಾಮಾನ್ಯರಿಗೆ ನಿಕಟವಾಗಿರುವ ಸಹಕಾರಿ ಸಂಘಗಳು ಸಾಲ ನೀಡುವ ಸಂದರ್ಭದಲ್ಲಿ ದಾಖಲೆಗಳ ಸರಳೀಕರಣಕ್ಕೆ ಮುಂದಾಗಬೇಕು ಎಂದು ಮನವಿ ಮಾಡಿದರು.
ಪ್ರಥಮ ಠೇವಣಿ ಪತ್ರವನ್ನು ಬಿಡುಗಡೆ ಮಾಡಿದ ದಕ್ಷಿಣ ಕನ್ನಡ ಜಿಲ್ಲಾ ಸಹಕಾರಿ ಯೂನಿಯನ್ ಅಧ್ಯಕ್ಷ ಶಶಿಕುಮಾರ್ ಬಾಲ್ಯೊಟ್ಟು, ಆದರ್ಶ ವಿವಿಧೋದ್ದೇಶ ಸಹಕಾರ ಸಂಘ ಸಹಕಾರಿ ಕ್ಷೇತ್ರದಲ್ಲಿ ಸಾಧಿಸುತ್ತಿರುವ ಪ್ರಗತಿಗೆ ಮೆಚ್ಚುಗೆ ವ್ಯಕ್ತಪಡಿಸಿದರು. ದಕ್ಷಿಣ ಕನ್ನಡ ಜಿಲ್ಲಾ ಹಾಲು ಉತ್ಪಾದಕರ ಒಕ್ಕೂಟದ ನಿರ್ದೇಶಕ ಎಸ್.ಬಿ. ಜಯರಾಮ್ ರೈ ಬಳಜ್ಜ, ಸವಣೂರು ಸೀತಾರಾಮ ರೈ ಅವರ ಆದರ್ಶ ಗುಣಗಳನ್ನು ಎಲ್ಲರೂ ಅಳವಡಿಸಿಕೊಳ್ಳಬೇಕು ಎಂದರು.
ಕಟ್ಟಡದ ಮಾಲಕ ಗಣೇಶ್ ರೈ, ಸಂಘದ ಉಪಾಧ್ಯಕ್ಷ ಎನ್. ಸುಂದರ ರೈ ಉಪಸ್ಥಿತರಿದ್ದರು. ಸಂಘದ ಸಿಬಂದಿಯಾಗಿದ್ದುಕೊಂಡೇ ಪಾಟ್ನಾದಲ್ಲಿ ನಡೆದ ಬ್ಯಾಡ್ಮಿಂಟನ್ ಪಂದ್ಯಾಟದಲ್ಲಿ ಭಾರತ ರಾಷ್ಟ್ರೀಯ ತಂಡದ ನಾಯಕಿಯಾಗಿ ತಂಡವನ್ನು ಮುನ್ನಡೆಸಿದ ಸಾಧನೆಗಾಗಿ ಜಯಲಕ್ಷ್ಮಿ ಅವರನ್ನು ಸನ್ಮಾನಿಸಲಾಯಿತು. ಇತ್ತೀಚೆಗೆ ನಿಧನ ಹೊಂದಿದ ಸಂಘದ ಸುಳ್ಯ ಶಾಖೆಯ ಸಿಬಂದಿಗೆ ಮೌನ ಪ್ರಾರ್ಥನೆಯ ಮೂಲಕ ಶ್ರದ್ಧಾಂಜಲಿ ಸಲ್ಲಿಸಲಾಯಿತು.
ನಿರ್ದೇಶಕರಾದ ಅಶ್ವಿನ್ ಎಲ್. ಶೆಟ್ಟಿ, ಜೈರಾಜ್ ಭಂಡಾರಿ ನೊಣಾಲು, ಜಯಪ್ರಕಾಶ್ ರೈ, ರವೀಂದ್ರನಾಥ ಶೆಟ್ಟಿ ಕೇನ್ಯ, ಬಾಪು ಸಾಹೇಬ್, ರಶ್ಮಿ ಎಸ್. ರೈ, ವಿ.ವಿ. ನಾರಾಯಣ ಭಟ್ ಹಾಗೂ ಸಹಾಯಕ ಮಹಾಪ್ರಬಂಧಕ ಸುನಾದ್‌ರಾಜ್ ಶೆಟ್ಟಿ ಅತಿಥಿಗಳನ್ನು ಗೌರವಿಸಿದರು.
ಪ್ರಾಸ್ತಾವಿಕವಾಗಿ ಮಾತನಾಡಿದ ಸಂಘದ ಅಧ್ಯಕ್ಷ ಸಹಕಾರರತ್ನ ಸವಣೂರು ಕೆ. ಸೀತಾರಾಮ ರೈ, ಕಳೆದ ೫೮ ವರ್ಷಗಳಿಂದ ಸಹಕಾರಿ ಕ್ಷೇತ್ರದಲ್ಲಿ ಸೇವೆ ಸಲ್ಲಿಸುತ್ತಿದ್ದೇನೆ. ೨೦೦೨ರಲ್ಲಿ ಆರಂಭಗೊಂಡ ಆದರ್ಶ ವಿವಿಧೋದ್ದೇಶ ಸಹಕಾರ ಸಂಘವು ಆರಂಭದಿಂದಲೇ ಸದಸ್ಯರಿಗೆ ನಿರಂತರವಾಗಿ ಡಿವಿಡೆಂಟ್ ನೀಡುತ್ತಾ ಸಾಧನೆ ಮಾಡಿದೆ ಎಂದರು. ಬೇರೆ ಜಿಲ್ಲೆಗಳಿಗೆ ಶಾಖೆ ವಿಸ್ತರಣೆ ಜತೆಗೆ ಸವಣೂರಿನಲ್ಲಿ ₹೬ ಕೋಟಿ ವೆಚ್ಚದಲ್ಲಿ ಮುಖ್ಯ ಕಚೇರಿ ಕಟ್ಟಡ ನಿರ್ಮಾಣವಾಗುತ್ತಿದ್ದು, ಮುಂದಿನ ಮಾರ್ಚ್‌ನಲ್ಲಿ ಉದ್ಘಾಟನೆಗೊಳ್ಳಲಿದೆ ಎಂದು ತಿಳಿಸಿದರು.
ಸುಳ್ಯ ಶಾಖೆಯ ಸಿಬಂದಿ ಪ್ರಿಯಾ ಪ್ರಾರ್ಥಿಸಿದರು. ಶಾಖೆಯ ವ್ಯವಸ್ಥಾಪಕಿ ರಕ್ಷಾ ವಂದಿಸಿದರು. ಮಹಾಪ್ರಬಂಧಕ ವಸಂತ ಜಾಲಾಡಿ ಹಾಗೂ ಪಾಂಡೇಶ್ವರ ಶಾಖೆಯ ಪ್ರಭಾರ ವ್ಯವಸ್ಥಾಪಕಿ ಮಹಾಲಕ್ಷ್ಮಿ ಕೆ. ಕಾರ್ಯಕ್ರಮ ನಿರ್ವಹಿಸಿದರು.






