ಪುತ್ತೂರು: ವೈದ್ಯಕೀಯ ತಜ್ಞ ಡಾ. ನಝೀರ್ ಅಹಮ್ಮದ್ ಡಯಾಬಿಟಿಸ್ ಸೆಂಟರ್, ರೋಟರಿ ಕ್ಲಬ್ ಪುತ್ತೂರು ಹಾಗೂ ರೋಟರ್ಯಾಕ್ಟ್ ಕ್ಲಬ್ ಪುತ್ತೂರು ಆಶ್ರಯದಲ್ಲಿ ಮಾಸಿಕ ಉಚಿತ ಆರೋಗ್ಯ ತಪಾಸಣಾ ಶಿಬಿರ ಜ.15ರಂದು ಕಲ್ಲಾರೆ ಕೃಷ್ಣ ಆರ್ಕೇಡ್‌ನಲ್ಲಿರುವ ಡಾ. ನಝೀರ್ ಅಹಮ್ಮದ್ ಅವರ ಕ್ಲಿನಿಕ್‌ನಲ್ಲಿ ಬೆಳಿಗ್ಗೆಯಿಂದ ಮಧ್ಯಾಹ್ನದವರೆಗೆ ನಡೆಯಿತು.
ಶಿಬಿರದಲ್ಲಿ ಥೈರಾಯಿಡ್ ಗ್ರಂಥಿ ತಪಾಸಣೆ, HBA1C, ರಕ್ತದ ಸಕ್ಕರೆ, ಕೊಲೆಸ್ಟ್ರಾಲ್, ಮೂಳೆ ಸಾಂದ್ರತೆ (BMD) ಹಾಗೂ ಡಯಾಬಿಟಿಕ್ ರೆಟಿನೋಪತಿ ಸಂಬಂಧಿತ ಕಣ್ಣಿನ ತಪಾಸಣೆಗಳನ್ನು ಉಚಿತವಾಗಿ ನಡೆಸಲಾಯಿತು. ಅತಿಯಾದ ದಣಿವು, ಸುಸ್ತು, ನಿತ್ರಾಣ, ಮಲಬದ್ಧತೆ ಅಥವಾ ಅತಿಸಾರ, ಶೀತ ಅಥವಾ ತಾಪಕ್ಕೆ ಅಸಹಿಷ್ಣುತೆ, ಕೂದಲು ಉದುರುವಿಕೆ, ನೆನಪಿನ ಶಕ್ತಿ ಕುಂದುವುದು, ಏಕಾಗ್ರತೆಯ ಕೊರತೆ, ತೂಕ ಹೆಚ್ಚಳ ಅಥವಾ ಇಳಿಕೆ, ಮಹಿಳೆಯರಲ್ಲಿ ಅತಿಯಾದ ಅಥವಾ ನಿಯಮ ತಪ್ಪಿದ ಮಾಸಿಕ ಸ್ರಾವ, ಕರ್ಕಶ ಸ್ವರ, ಗಂಟಲಿನ ಊತ, ಅಧಿಕ ಎದೆ ಬಡಿತ ಅಥವಾ ರಕ್ತದೊತ್ತಡ ಸಮಸ್ಯೆ ಇರುವವರು ಶಿಬಿರದಲ್ಲಿ ಭಾಗವಹಿಸಿ ತಜ್ಞ ವೈದ್ಯರಿಂದ ಸಲಹೆ ಹಾಗೂ ಚಿಕಿತ್ಸೆ ಪಡೆದರು.


ವರ್ಷಕ್ಕೊಮ್ಮೆ ಕಣ್ಣಿನ ತಪಾಸಣೆ ಅಗತ್ಯ
ಮಧುಮೇಹ ರೋಗಿಗಳು ವರ್ಷಕ್ಕೆ ಕನಿಷ್ಠ ಒಂದುವಾರಿ ಕಣ್ಣಿನ ಫಂಡಸ್ ಪರೀಕ್ಷೆ ಮಾಡಿಸಿಕೊಳ್ಳುವುದು ಅತ್ಯವಶ್ಯ ಎಂದು ಡಾ. ನಝೀರ್ ಅಹಮ್ಮದ್ ತಿಳಿಸಿದರು. ಪ್ರಾರಂಭಿಕ ಹಂತದಲ್ಲೇ ಡಯಾಬಿಟಿಕ್ ರೆಟಿನೋಪತಿಯನ್ನು ಪತ್ತೆಹಚ್ಚಿ ಚಿಕಿತ್ಸೆ ಆರಂಭಿಸಿದರೆ ದೃಷ್ಟಿ ನಷ್ಟವನ್ನು ತಡೆಯಬಹುದು. ಆಧುನಿಕ ಫಂಡಸ್ ಕ್ಯಾಮೆರಾ ಮೂಲಕ ಕಣ್ಣು ವಿಸ್ತರಿಸುವ ಡ್ರಾಪ್ಸ್ ಅಗತ್ಯವಿಲ್ಲದೆ, ನೋವಿಲ್ಲದ, ಸುರಕ್ಷಿತ ಹಾಗೂ ವೇಗವಾಗಿ ಪರೀಕ್ಷೆ ನಡೆಸಲು ಸಾಧ್ಯವಾಗಿದೆ ಎಂದು ಹೇಳಿದರು.
ಈ ಪರೀಕ್ಷೆಯಿಂದ ಕೆಲ ನಿಮಿಷಗಳಲ್ಲೇ ಕಣ್ಣಿನ ಒಳಭಾಗದ ಸ್ಪಷ್ಟ ಡಿಜಿಟಲ್ ಚಿತ್ರ ದೊರಕುತ್ತಿದ್ದು, ಆರಂಭಿಕ ಹಂತದ ರೆಟಿನೋಪತಿಯನ್ನೂ ಗುರುತಿಸಬಹುದು. ವೃದ್ಧರು ಹಾಗೂ ಮಧುಮೇಹ ರೋಗಿಗಳಿಗೆ ಇದು ಬಹಳ ಅನುಕೂಲಕರವಾಗಿದೆ.
ತಡೆಯುವುದು ಚಿಕಿತ್ಸೆಗೆ ಮಿಗಿಲು
ರಕ್ತದ ಸಕ್ಕರೆ, ರಕ್ತದೊತ್ತಡ ಹಾಗೂ ಕೊಲೆಸ್ಟ್ರಾಲ್ ನಿಯಂತ್ರಣದಲ್ಲಿ ಇಟ್ಟುಕೊಳ್ಳುವುದು, ವೈದ್ಯರ ಸಲಹೆಯಂತೆ ಔಷಧ ಸೇವಿಸುವುದು ಹಾಗೂ ವರ್ಷಕ್ಕೊಮ್ಮೆ ಕಣ್ಣಿನ ತಪಾಸಣೆ ಮಾಡಿಸಿಕೊಳ್ಳುವುದರಿಂದ ಡಯಾಬಿಟಿಕ್ ರೆಟಿನೋಪತಿಯಿಂದಾಗುವ ದೃಷ್ಟಿ ನಷ್ಟವನ್ನು ತಪ್ಪಿಸಬಹುದು. ಕಳೆದುಕೊಂಡ ದೃಷ್ಟಿಯನ್ನು ಮರಳಿ ಪಡೆಯಲು ಸಾಧ್ಯವಿಲ್ಲ ಎಂಬುದನ್ನು ಗಮನದಲ್ಲಿಟ್ಟುಕೊಳ್ಳಬೇಕು ಎಂದು ತಿಳಿಸಲಾಯಿತು.
ಶಿಬಿರದ ವಿವರ
ಶಿಬಿರದಲ್ಲಿ
ರಕ್ತದ ಸಕ್ಕರೆ ಪರೀಕ್ಷೆ – 92 ಮಂದಿ
HBA1C – 65 ಮಂದಿ
ಕೊಲೆಸ್ಟ್ರಾಲ್ – 55 ಮಂದಿ
ಥೈರಾಯಿಡ್ – 75 ಮಂದಿ
ಮೂಳೆ ಸಾಂದ್ರತೆ – 87 ಮಂದಿ
ರೆಟಿನಾ ತಪಾಸಣೆ – 35 ಮಂದಿ
ಭಾಗವಹಿಸಿ ಲಾಭ ಪಡೆದರು.
ಡಯಾಬಿಟಿಕ್ ರೆಟಿನೋಪತಿ ಕುರಿತು ಮಾತನಾಡಿದ ತಜ್ಞರು, ಮಧುಮೇಹವು ದೇಹದ ಹಲವು ಅಂಗಗಳಿಗೆ ಹಾನಿ ಉಂಟುಮಾಡುವಂತೆ ಕಣ್ಣಿನ ರೆಟಿನಾಗೆ ಸಹ ನಿಧಾನವಾಗಿ ಹಾನಿ ಉಂಟುಮಾಡುತ್ತದೆ ಎಂದು ತಿಳಿಸಿದರು. ಆರಂಭಿಕ ಹಂತದಲ್ಲಿ ಯಾವುದೇ ಲಕ್ಷಣಗಳು ಕಾಣಿಸದಿರುವುದರಿಂದ ಮುಂಚಿತ ತಪಾಸಣೆ ಅತ್ಯಂತ ಅಗತ್ಯ. ಅಧ್ಯಯನಗಳ ಪ್ರಕಾರ ಸುಮಾರು 30 ಶೇಕಡಾ ಮಧುಮೇಹ ರೋಗಿಗಳಿಗೆ ಜೀವನದ ಯಾವುದೋ ಹಂತದಲ್ಲಿ ಕಣ್ಣಿನ ಹಾನಿ ಉಂಟಾಗುವ ಸಾಧ್ಯತೆ ಇದೆ ಎಂದು ಕ್ಲಿನಿಕ್ ಪ್ರಕಟಣೆ ತಿಳಿಸಿದೆ.
ರೋಟರಿ ಕ್ಲಬ್ ಪುತ್ತೂರು ಅಧ್ಯಕ್ಷ ಡಾ. ಶ್ರೀಪ್ರಕಾಶ್ ಬಿ. ಹಾಗೂ ಸದಸ್ಯ ಹೆರಾಲ್ಡ್ ಮಾಡ್ತಾ ಉಪಸ್ಥಿತರಿದ್ದರು. ಇಂಟಾಸ್ ಕಂಪನಿಯ ಚರಣ್ ಎನ್.ಹೆಚ್., ಮೈಕ್ರೋ ಲ್ಯಾಬ್‌ನ ಪ್ರಶಾಂತ್, ಮ್ಯಾನ್‌ಕೈಂಡ್ ಕಂಪನಿಯ ತೌಸಿಫ್ ಹಾಗೂ ರಕ್ಷಿತ್, ಸನ್ ಫಾರ್ಮಾದ ಯತೀಶ್, ಅಗಿಲಾಸ್ ಲ್ಯಾಬ್, ಫೈರೋಕೇರ್ ಲ್ಯಾಬ್ ಹಾಗೂ ಡಾ. ನಝೀರ್ ಅಹಮ್ಮದ್ ಕ್ಲಿನಿಕ್ ಸಿಬ್ಬಂದಿ ಸಹಕರಿಸಿದರು.

Leave a Reply

Your email address will not be published. Required fields are marked *

Join WhatsApp Group
error: Content is protected !!