
ಪುತ್ತೂರು: ನನ್ನಲ್ಲಿ ಶಕ್ತಿ ಇರುವ ತನಕ ಬಡವರ ಸೇವೆಯನ್ನು ಮುಂದುವರಿಸುತ್ತೇನೆ. ಬಡವರಿಗೆ ಸಹಾಯ ಮಾಡುವಾಗ, ಉಡುಗೋರೆ ನೀಡುವಾಗ ಕೆಲವರು ಗೇಲಿ ಮಾಡುತ್ತಾರೆ. ಆದರೆ ಆ ಗೇಲಿ ನನ್ನ ಮೇಲಲ್ಲ, ಬಡವರ ಮೇಲೆಯೇ ಆಗುತ್ತದೆ. ಯಾರೇ ಏನೇ ಮಾತಾಡಲಿ, ಬಡವರ ಸೇವೆಯನ್ನು ನಾನು ನಿಲ್ಲಿಸುವುದಿಲ್ಲ. ಬಡವರ ಆಶೀರ್ವಾದದಿಂದಲೇ ನಾನು ಶಾಸಕನಾಗಿದ್ದೇನೆ. ಚುನಾವಣೆಯ ವೇಳೆಯೂ ಅವರು ನನ್ನನ್ನು ಆಶೀರ್ವಾದ ಮಾಡುತ್ತಾರೆ ಎಂಬ ಪೂರ್ಣ ನಂಬಿಕೆ ನನಗಿದೆ ಎಂದು ಪುತ್ತೂರು ಶಾಸಕ ಅಶೋಕ್ ರೈ ಹೇಳಿದರು.
ಅವರು ಸಂಪ್ಯ ಕಮ್ಮಾಡಿ ಮೈದಾನದಲ್ಲಿ ಆರ್ಯಾಪು ಹಾಗೂ ಕುರಿಯ ಗ್ರಾಮಸ್ಥರಿಗೆ ಆಯೋಜಿಸಿದ್ದ ‘ಅಶೋಕ ಜನಮನ’ ಉಡುಗೋರೆ ವಿತರಣಾ ಕಾರ್ಯಕ್ರಮದಲ್ಲಿ ಮಾತನಾಡಿದರು.
ಪುತ್ತೂರು ಸೇರಿದಂತೆ ಜಿಲ್ಲೆಯಲ್ಲಿ ಸಾಕಷ್ಟು ಶ್ರೀಮಂತರು ಇದ್ದರೂ ಹಲವರು ಸಮಾಜದ ಹಿತಕ್ಕಾಗಿ ಕೈಚಾಚುತ್ತಿಲ್ಲ. ಎಲ್ಲರೂ ಬಡವರಿಗೆ ನೆರವಾದರೆ ಅವರ ಆರ್ಥಿಕ ಸ್ಥಿತಿ ಸುಧಾರಿಸಬಹುದು ಎಂದರು. ಅಶೋಕ ಜನಮನ ಕಾರ್ಯಕ್ರಮದಲ್ಲಿ ಕೆಲವರಿಗೆ ಉಡುಗೋರೆ ಸಿಕ್ಕಿಲ್ಲ ಎಂಬ ಮಾತುಗಳು ಕೇಳಿ ನನಗೂ ನನ್ನ ಕುಟುಂಬಕ್ಕೂ ಬೇಸರವಾಯಿತು. ಅದಕ್ಕಾಗಿಯೇ ಗ್ರಾಮಗಳಿಗೆ ತೆರಳಿ ಪ್ರತೀ ಕುಟುಂಬಕ್ಕೂ ಉಡುಗೋರೆ ವಿತರಿಸುವ ನಿರ್ಧಾರ ಕೈಗೊಂಡಿದ್ದೇನೆ ಎಂದು ತಿಳಿಸಿದರು.
ಗ್ಯಾರಂಟಿ ಯೋಜನೆಗಳಿಂದ ಕುಟುಂಬಗಳಿಗೆ ನೆರವು
ಕರ್ನಾಟಕ ಕಾಂಗ್ರೆಸ್ ಸರ್ಕಾರದ ಪಂಚ ಗ್ಯಾರಂಟಿ ಯೋಜನೆಗಳು ಪ್ರತೀ ಕುಟುಂಬಕ್ಕೂ ಲಾಭ ತಂದಿವೆ. ಇಂತಹ ಯೋಜನೆಗಳನ್ನು ಇದುವರೆಗೆ ಯಾವುದೇ ಸರ್ಕಾರ ಜಾರಿಗೆ ತಂದಿಲ್ಲ. ಪಕ್ಷಭೇದವಿಲ್ಲದೆ ಎಲ್ಲರಿಗೂ ಈ ಯೋಜನೆಗಳನ್ನು ನೀಡಲಾಗಿದೆ. ಬಿಜೆಪಿಯವರಿಗೂ ಈ ಸೌಲಭ್ಯ ಸಿಕ್ಕಿದೆ. ಕಾಂಗ್ರೆಸ್ ಆಡಳಿತದಲ್ಲಿ ಜಾತಿ–ಧರ್ಮದ ರಾಜಕೀಯ ಇಲ್ಲ, ಎಲ್ಲರನ್ನೂ ಸಮಾನವಾಗಿ ನೋಡಲಾಗುತ್ತದೆ ಎಂದು ಹೇಳಿದರು. ಗ್ಯಾರಂಟಿ ಯೋಜನೆಗಳನ್ನು ಗೇಲಿ ಮಾಡುವವರ ಪತ್ನಿಗೂ ಸಿದ್ದರಾಮಯ್ಯ ಸರ್ಕಾರದ ಯೋಜನೆಗಳಿಂದ ಲಾಭವಾಗಿದೆ ಎಂದು ವ್ಯಂಗ್ಯವಾಡಿದರು.
ವಿಧಾನಸಭೆಯಲ್ಲಿನ ಟೀಕೆ
ವಿಧಾನಸಭೆಯಲ್ಲಿ ತುಳುವಿನ ಬಗ್ಗೆ ಹಾಗೂ ಜಿಲ್ಲೆಯ ಸಮಸ್ಯೆಗಳ ಕುರಿತು ಮಾತನಾಡಲು ಮುಂದಾದಾಗ ಇತರರು ಮಧ್ಯೆ ಮಾತನಾಡುತ್ತಾರೆ ಎಂದು ಅಸಮಾಧಾನ ವ್ಯಕ್ತಪಡಿಸಿದ ಶಾಸಕರು, ಇಷ್ಟು ವರ್ಷ ಶಾಸಕರಾಗಿದ್ದವರು ಯಾಕೆ ಈ ವಿಷಯಗಳನ್ನು ಪ್ರಸ್ತಾಪಿಸಲಿಲ್ಲ ಎಂದು ಪ್ರಶ್ನಿಸಿದರು. ನಾನು ವಿಷಯ ಎತ್ತಿದಾಗ ಮಾತ್ರ ಚರ್ಚೆಗೆ ಬರುತ್ತಾರೆ ಎಂದು ಪರೋಕ್ಷವಾಗಿ ಬಿಜೆಪಿ ಶಾಸಕರನ್ನು ಟೀಕಿಸಿದರು.
ಅಭಿವೃದ್ಧಿಗೆ ಜನರ ಬೆಂಬಲ
ಪುತ್ತೂರಿನ ಜನತೆ ಅಭಿವೃದ್ಧಿ ಬಯಸುತ್ತಿದ್ದಾರೆ. ಮೆಡಿಕಲ್ ಕಾಲೇಜು ತರಲು ಯಾರಿಂದಲೂ ಸಾಧ್ಯವಾಗಿರಲಿಲ್ಲ. ಪುತ್ತೂರಿಗೆ 2,400 ಕೋಟಿ ರೂ. ಅನುದಾನ ತಂದಿದ್ದೇನೆ. ಬಡವರಿಗೆ ನಿವೇಶನ ಹಂಚಲು 380 ಎಕರೆ ಭೂಮಿಯನ್ನು ಕಾಯ್ದಿರಿಸಲಾಗಿದೆ. ಕುಡಿಯುವ ನೀರು ಸೇರಿದಂತೆ ಮೂಲಭೂತ ಸೌಕರ್ಯಗಳಿಗೆ ಆದ್ಯತೆ ನೀಡಲಾಗಿದೆ. ಇದುವರೆಗೆ ಆಗದ ಕೆಲಸಗಳು ಈಗ ಆಗುತ್ತಿವೆ. ಅಭಿವೃದ್ಧಿಯಲ್ಲಿ ರಾಜಕೀಯ ಮಾಡಿಲ್ಲ, ಅಕ್ರಮ–ಸಕ್ರಮದಲ್ಲೂ ರಾಜಕೀಯ ಇಲ್ಲ. ಇದರಿಂದ ಅನ್ಯ ಪಕ್ಷದವರೂ ನಮ್ಮೊಂದಿಗೆ ಸೇರಿಕೊಳ್ಳುತ್ತಿದ್ದಾರೆ ಎಂದು ಹೇಳಿದರು. ಧರ್ಮಾಧಾರಿತ ರಾಜಕೀಯಕ್ಕೆ ಜನ ಬೆಂಬಲ ನೀಡುವುದಿಲ್ಲ ಎಂದೂ ಅವರು ಹೇಳಿದರು.
ಉಡುಗೋರೆಗೆ ಜನಸಾಗರ
ಕಮ್ಮಾಡಿ ಮೈದಾನದಲ್ಲಿ ನಡೆದ ಕಾರ್ಯಕ್ರಮದಲ್ಲಿ ಆರ್ಯಾಪು ಮತ್ತು ಕುರಿಯ ಗ್ರಾಮದ ಮೂರು ಸಾವಿರಕ್ಕೂ ಹೆಚ್ಚು ಮಂದಿ ಭಾಗವಹಿಸಿದ್ದರು. ಆಗಮಿಸಿದ ಎಲ್ಲರಿಗೂ ಉಡುಗೋರೆ ವಿತರಿಸಲಾಯಿತು. ಮುಂದಿನ ಭಾನುವಾರ ಮತ್ತೊಂದು ಗ್ರಾಮದಲ್ಲಿ ಇದೇ ರೀತಿಯ ಕಾರ್ಯಕ್ರಮ ನಡೆಯಲಿದೆ ಎಂದು ತಿಳಿಸಲಾಯಿತು. ಈ ಸಂದರ್ಭದಲ್ಲಿ ಶಾಸಕರ ಪತ್ನಿ ಸುಮಾ ಅಶೋಕ್ ರೈ ಅವರು ಸಹ ಭಾಗವಹಿಸಿ ಜನರಿಗೆ ಉಡುಗೋರೆ ವಿತರಿಸಿದರು.
ಕಾರ್ಯಕ್ರಮದಲ್ಲಿ ಕೆಪಿಸಿಸಿ ಸಂಯೋಜಕ ಕಾವು ಹೇಮನಾಥ ಶೆಟ್ಟಿ, ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಎಂ.ಎಸ್. ಮಹಮ್ಮದ್, ಪುತ್ತೂರು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಕೃಷ್ಣಪ್ರಸಾದ್ ಆಳ್ವ, ಜಿಲ್ಲಾ ಚುನಾವಣಾ ಪ್ರಚಾರ ಸಮಿತಿ ಅಧ್ಯಕ್ಷ ಮಹಮ್ಮದಾಲಿ, ವಿಟ್ಲ ಬ್ಲಾಕ್ ಅಧ್ಯಕ್ಷ ಪದ್ಮನಾಭ ಪೂಜಾರಿ, ಮಹಿಳಾ ಕಾಂಗ್ರೆಸ್ ಕಾರ್ಯಾಧ್ಯಕ್ಷೆ ಚಂದ್ರಪ್ರಭಾ ಗೌಡ ಸೇರಿದಂತೆ ಹಲವು ನಾಯಕರು ಉಪಸ್ಥಿತರಿದ್ದರು.
ರೈ ಚಾರಿಟೇಬಲ್ ಟ್ರಸ್ಟ್ ಕಾರ್ಯಾಧ್ಯಕ್ಷ ಸುದೇಶ್ ಶೆಟ್ಟಿ ಸ್ವಾಗತಿಸಿದರು. ಆರ್ಯಾಪು ವಲಯ ಕಾಂಗ್ರೆಸ್ ಅಧ್ಯಕ್ಷ ಗಿರೀಶ್ ರೈ ವಂದಿಸಿದರು. ನೇಮಾಕ್ಷ ಸುವರ್ಣ ಮಗಿರೆ ಕಾರ್ಯಕ್ರಮ ನಿರೂಪಿಸಿದರು. ಸಂಗೀತ ರಸಮಂಜರಿ ಹಾಗೂ ಸಂಜೆ ಉಪಾಹಾರದ ವ್ಯವಸ್ಥೆ ಮಾಡಲಾಗಿತ್ತು.






