
ಪುತ್ತೂರು: ಚಪ್ಪಲಿ ಕದಿಯುವ ಭೀತಿಯಿಂದ ಚಪ್ಪಲಿಗೆ ಬೀಗ ಹಾಕುವ ದೃಶ್ಯಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ತಮಾಷೆಯಾಗಿ ಚಿತ್ರಿಸಲಾಗುತ್ತದೆ. ಇದನ್ನು ನೋಡಿ ನಗುವವರೂ ಇದ್ದಾರೆ, ‘ಇಂತಹದ್ದೂ ಇದೆಯೇ?’ ಎಂದು ಮೂದಲಿಸುವವರೂ ಇದ್ದಾರೆ. ಆದರೆ ಪುತ್ತೂರಿನಲ್ಲಿ ಕಂಡ ಈ ದೃಶ್ಯ ತಮಾಷೆಯಲ್ಲ, ನೈಜ ಸಂಗತಿ ಎಂಬುದನ್ನು ಸಾಬೀತುಪಡಿಸಿದೆ.
ನಗರದ ಸಭಾಭವನವೊಂದರಲ್ಲಿ ಕಾರ್ಯಕ್ರಮ ನಡೆಯುತ್ತಿದ್ದ ಸಂದರ್ಭ, ಸಭಾಂಗಣದೊಳಗೆ ಪ್ರವೇಶಿಸಿದವರು ತಮ್ಮ ಚಪ್ಪಲಿಗಳನ್ನು ಪ್ರವೇಶ ದ್ವಾರದ ಬಳಿ ಇಟ್ಟು ಒಳಗೆ ತೆರಳಿದ್ದರು. ಇದೇ ವೇಳೆ, ಸಭಾಭವನದ ಸ್ವಲ್ಪ ದೂರದಲ್ಲಿ ಚಪ್ಪಲಿಗಳ ಬಾರನ್ನು ಜೋಡಿಸಿ ಹಳೆಯ ಬೀಗವೊಂದನ್ನು ಹಾಕಿರುವುದು ಗಮನ ಸೆಳೆಯಿತು.
ಮೊದಲ ನೋಟಕ್ಕೆ ಅಚ್ಚರಿಯಂತೆ ಕಂಡ ಈ ದೃಶ್ಯ ನಿಜವಾಗಿಯೂ ಚಪ್ಪಲಿ ಕಳವು ತಪ್ಪಿಸಲು ಕೈಗೊಂಡ ಕ್ರಮವಾಗಿತ್ತು. ಚಪ್ಪಲಿಗಳು ಕಳವಾದ ಅನುಭವ ಹಲವು ಬಾರಿ ಎದುರಾದ ಹಿನ್ನೆಲೆಯಲ್ಲಿ, ಆ ವ್ಯಕ್ತಿ ಈ ರೀತಿಯ ಮುನ್ನೆಚ್ಚರಿಕಾ ಕ್ರಮ ಕೈಗೊಂಡಿದ್ದಾನೆ ಎನ್ನಲಾಗಿದೆ.
ಸಾಮಾನ್ಯವಾಗಿ ನಗುವ ವಿಷಯವಾಗಿ ಕಾಣಿಸುವ ಘಟನೆ, ವಾಸ್ತವದಲ್ಲಿ ಸಾರ್ವಜನಿಕ ಸ್ಥಳಗಳಲ್ಲಿ ಕಳ್ಳತನದ ಭೀತಿಯನ್ನೇ ಪ್ರತಿಬಿಂಬಿಸುತ್ತಿದೆ






