ಮಂಗಳೂರು: ವಾಹನದ ಡ್ಯಾಶ್‌ಬೋರ್ಡ್‌ನಲ್ಲಿಟ್ಟಿದ್ದ ನಗದು ಕಳವು ಮಾಡಿದ ಪ್ರಕರಣವನ್ನು ಮಂಗಳೂರು ಉತ್ತರ ಪೊಲೀಸ್ ಠಾಣೆ ಪೊಲೀಸರು ಭೇಧಿಸಿ ಆರೋಪಿಯನ್ನು ಬಂಧಿಸಿದ್ದಾರೆ. ಆರೋಪಿಯಿಂದ ನಗದು, ದ್ವಿಚಕ್ರ ವಾಹನ ಹಾಗೂ ಮೊಬೈಲ್ ಫೋನ್ ವಶಪಡಿಸಿಕೊಂಡಿದ್ದಾರೆ.
ಮಹಮ್ಮದ್ ನಿಜಾಮುದ್ದಿನ್ ಅವರು ಫೆ. 7ರಂದು ಶ್ರೀಧರ ಆಳ್ವ ಅವರಿಗೆ ಸೇರಿದ ಅಡಿಕೆಯನ್ನು ಕೆಎ–19–AE–8663 ಸಂಖ್ಯೆಯ ಟಾಟಾ ಇಂಟ್ರಾ ವಾಹನದಲ್ಲಿ ಸಾಗಿಸಿ ಬಿಬಿ ಅಲಾಬಿಯ ಅಂಬಾರ ಸುಪಾರಿ ಅಂಗಡಿಗೆ ಮಾರಾಟ ಮಾಡಿ ಪಡೆದ ರೂ. 1,28,740 ಅನ್ನು ವಾಹನದ ಡ್ಯಾಶ್‌ಬೋರ್ಡ್‌ನಲ್ಲಿ ಇಟ್ಟುಕೊಂಡಿದ್ದರು. ಬಳಿಕ ಬಂದರ್‌ನ ಜೆ.ಎಂ.ರೋಡ್‌ನ ಸದರ್ನ್ ಏಜೆನ್ಸಿಯಲ್ಲಿ ಖರೀದಿ ಕಾರ್ಯ ಮುಗಿಸಿ ವಾಹನಕ್ಕೆ ಹಿಂತಿರುಗಿದಾಗ ನಗದು ಕಾಣೆಯಾಗಿರುವುದು ಗೊತ್ತಾಯಿತು. ಈ ಕುರಿತು ಮಂಗಳೂರು ಉತ್ತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
ಪ್ರಕರಣದ ತನಿಖೆ ಕೈಗೊಂಡ ಪೊಲೀಸ್ ನಿರೀಕ್ಷಕ ಸಚಿನ್ ಕುಮಾರ್, ಉಪ ನಿರೀಕ್ಷಕ ಶೀತಲ್ ಅಲಗೂರು, ಎಎಸ್‌ಐಗಳಾದ ಶಶಿಧರ, ದಾಮೋದರ್ ಹಾಗೂ ಸಿಬ್ಬಂದಿ ತಂಡ ಫೆ. 8ರಂದು ನಗರದ ಮಣ್ಣಗುಡ್ಡ ಜಂಕ್ಷನ್ ಬಳಿ ಆರೋಪಿ ಝಾಕೀರ್ ಹುಸೈನ್ ಅಲಿಯಾಸ್ ಜಾಕಿ (38) ಅವರನ್ನು ವಶಕ್ಕೆ ಪಡೆದರು.
ಆರೋಪಿಯಿಂದ ರೂ. 70,000 ನಗದು, ಕೃತ್ಯಕ್ಕೆ ಬಳಸಿದ ದ್ವಿಚಕ್ರ ವಾಹನ ಹಾಗೂ ಕಳವು ಮಾಡಿದ ಹಣದಿಂದ ಖರೀದಿಸಿದ ವಿವೋ ಕಂಪನಿಯ ಮೊಬೈಲ್ ಫೋನ್ ವಶಪಡಿಸಿಕೊಂಡಿದ್ದಾರೆ.
ಆರೋಪಿಯನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು, ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ. ಆರೋಪಿತನ ವಿರುದ್ಧ ಕುಂದಾಪುರ ಪೊಲೀಸ್ ಠಾಣೆಯಲ್ಲಿ ರಾತ್ರಿ ಮನೆ ಕಳವು ಪ್ರಕರಣ ಹಾಗೂ ಮಂಗಳೂರು ದಕ್ಷಿಣ ಪೊಲೀಸ್ ವ್ಯಾಪ್ತಿಯಲ್ಲಿ ನಗದು ಕಳವು ಪ್ರಕರಣಗಳು ದಾಖಲಾಗಿರುವುದಾಗಿ ಪೊಲೀಸರು ತಿಳಿಸಿದ್ದಾರೆ

Leave a Reply

Your email address will not be published. Required fields are marked *

Join WhatsApp Group
error: Content is protected !!