ಬೆಳ್ತಂಗಡಿ ತಾಲೂಕಿನಲ್ಲೊಂದು ಕಾಲೇಜು ವಿದ್ಯಾರ್ಥಿನಿಯನ್ನು ಮೂವರು ಮುಸುಕುಧಾರಿಗಳು ಕಾರಿನಲ್ಲಿ ಅಪಹರಣ ಮಾಡಲು ಯತ್ನಿಸಿ ಚೂರಿಯಿಂದ ಇರಿದಿದ್ದಾರೆ ಎಂಬ ಪ್ರಕರಣಕ್ಕೆ ಹೊಸ ತಿರುವು ಸಿಕ್ಕಿದ್ದು, ಅದು ನಾಟಕೀಯವಾಗಿ ರೂಪಿಸಿದ ಕಥೆಯಾಗಿದೆ ಎಂದು ಪೊಲೀಸ್ ತನಿಖೆಯಲ್ಲಿ ಬಹಿರಂಗವಾಗಿದೆ.
ಕಾಶಿಬೆಟ್ಟು ಸರ್ಕಾರಿ ಕಾಲೇಜಿಗೆ ತೆರಳುತ್ತಿದ್ದ ವೇಳೆ ಸ್ಕೂಟರ್‌ನ್ನು ತಡೆದು, ಕಾರಿನಲ್ಲಿ ಬಂದ ಮೂವರು ಅಪಹರಣಕ್ಕೆ ಯತ್ನಿಸಿ ಹಲ್ಲೆ ನಡೆಸಿದ್ದಾರೆ ಎಂದು ವಿದ್ಯಾರ್ಥಿನಿ ದೂರು ನೀಡಿದ್ದಳು. ಗಾಯಗೊಂಡ ಸ್ಥಿತಿಯಲ್ಲಿ ಬೆಳ್ತಂಗಡಿ ಸರ್ಕಾರಿ ಆಸ್ಪತ್ರೆಗೆ ದಾಖಲಾಗಿದ್ದಳು. ಘಟನೆಗೆ ಸಂಬಂಧಿಸಿ ಶಾಸಕ ಹರೀಶ್ ಪೂಂಜ ಹಾಗೂ ಪೊಲೀಸ್ ಅಧಿಕಾರಿಗಳು ಆಸ್ಪತ್ರೆಗೆ ಭೇಟಿ ನೀಡಿ ಮಾಹಿತಿ ಸಂಗ್ರಹಿಸಿದ್ದರು.
ವಿದ್ಯಾರ್ಥಿನಿ ನೀಡಿದ ಮಾಹಿತಿಯಂತೆ, ಕಾರಿನ ನಂಬರ್‌ಪ್ಲೇಟಿಗೆ ಬಟ್ಟೆ ಕಟ್ಟಲಾಗಿತ್ತು, ಆರೋಪಿಗಳು ಮುಖಕ್ಕೆ ಮುಸುಕು ಹಾಕಿಕೊಂಡಿದ್ದರು ಹಾಗೂ ಹಿಂದಿನಿಂದ ಬೈಕ್ ಬರುತ್ತಿರುವುದನ್ನು ಗಮನಿಸಿ ಸ್ಥಳದಿಂದ ಪರಾರಿಯಾಗಿದ್ದಾರೆ ಎಂದು ಹೇಳಲಾಗಿತ್ತು. ಈ ಹೇಳಿಕೆಯ ಆಧಾರದ ಮೇಲೆ ಪೊಲೀಸರು ಸುತ್ತಮುತ್ತಲಿನ ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸಿ ತನಿಖೆ ಕೈಗೊಂಡಿದ್ದರು.
ಆದರೆ ವಿದ್ಯಾರ್ಥಿನಿ ಹೇಳಿದ ರೀತಿಯ ಯಾವುದೇ ಕಾರು ಆ ಪ್ರದೇಶದಲ್ಲಿ ಸಂಚರಿಸಿರುವ ಸುಳಿವು ಸಿಕ್ಕಿರಲಿಲ್ಲ. ಕೂಲಂಕಷ ವಿಚಾರಣೆಯಲ್ಲಿ ಅಪಹರಣ ಯತ್ನ ಅಥವಾ ದಾಳಿ ನಡೆದಿಲ್ಲ ಎಂಬುದು ಸ್ಪಷ್ಟವಾಗಿದೆ. ಕಾಲೇಜಿಗೆ ಹೋಗಲು ಇಷ್ಟವಿಲ್ಲದ ಕಾರಣ ವಿದ್ಯಾರ್ಥಿನಿಯೇ ತನ್ನ ಕೈಗೆ ಬ್ಲೇಡ್‌ನಿಂದ ಗೀಚಿಕೊಂಡು ಅಪಹರಣದ ನಾಟಕವಾಡಿದ್ದಾಳೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.

Leave a Reply

Your email address will not be published. Required fields are marked *

Join WhatsApp Group
error: Content is protected !!