ಪುತ್ತೂರು: ನಕಲಿ ದಾಖಲೆ ಸೃಷ್ಟಿಸಿ ಲಾರಿಯಲ್ಲಿ ಕೆಂಪುಕಲ್ಲು ಸಾಗಾಟ ಮಾಡುತ್ತಿದ್ದ ಪ್ರಕರಣವನ್ನು ಪತ್ತೆ ಹಚ್ಚಿದ ಪುತ್ತೂರು ಗ್ರಾಮಾಂತರ ಠಾಣೆ ಪೊಲೀಸರು, ಕಲ್ಲು ಸಹಿತ ಲಾರಿಯನ್ನು ವಶಕ್ಕೆ ಪಡೆದು ನಾಲ್ವರನ್ನು ಬಂಧಿಸಿದ್ದಾರೆ.
ಬಂಧಿತರು ಅನಿಕೇತನ್ ಅಲಿಯಾಸ್ ಅನಿಲ್, ಜಯಪ್ರಕಾಶ್, ಅಜಿತ್ ಕುಮಾರ್ ಹಾಗೂ ಕಿಶನ್ ಎಂದು ಗುರುತಿಸಲಾಗಿದೆ.
ಪುತ್ತೂರು ಗ್ರಾಮಾಂತರ ಪೊಲೀಸ್ ಠಾಣೆಯ ಉಪನಿರೀಕ್ಷಕ ಗುಣಪಾಲ ಜೆ. ಮತ್ತು ಸಿಬ್ಬಂದಿ ಗಸ್ತು ನಿರತರಾಗಿದ್ದ ವೇಳೆ ಈಶ್ವರಮಂಗಲ ಕಡೆಯಿಂದ ಅತಿವೇಗ ಹಾಗೂ ನಿರ್ಲಕ್ಷ್ಯವಾಗಿ ಬರುತ್ತಿದ್ದ ಈಚರ್ ಲಾರಿಯನ್ನು ಪುಳಿತಾಡಿ ಬಳಿ ತಡೆದು ಪರಿಶೀಲನೆ ನಡೆಸಿದರು. ಲಾರಿಯಲ್ಲಿ ಕೆಂಪುಕಲ್ಲು ತುಂಬಿರುವುದು ಪತ್ತೆಯಾಯಿತು.
ಸಾಗಾಟಕ್ಕೆ ಸಂಬಂಧಿಸಿದ ಪರವಾನಿಗೆ ಕುರಿತು ಚಾಲಕ ಕಿಶನ್‌ನನ್ನು ವಿಚಾರಿಸಿದಾಗ, ಅನಿಕೇತನ್ ತನ್ನ ಕೇರಳ ರಾಜ್ಯದ ಮಿಂಚಿಪದವು ಬಸ್ತಿ ಪ್ರದೇಶದಿಂದ ಯಾವುದೇ ನೈಜ ಪರವಾನಿಗೆ ಇಲ್ಲದೆ ಕೆಂಪುಕಲ್ಲು ಸಾಗಾಟ ಮಾಡಲು ಯತ್ನಿಸಿದ್ದಾನೆ ಎಂಬುದು ತಿಳಿದುಬಂದಿದೆ. ತನ್ನ ಹೆಸರಿನ ಕೆಎ–21–ಸಿ–8141 ಲಾರಿಗೆ ನೀಡಿದ್ದ ಇ–ಪಾಸ್‌ನಲ್ಲಿದ್ದ ಲಾರಿ ಸಂಖ್ಯೆಯನ್ನು ಅಳಿಸಿ, ಜಯಪ್ರಕಾಶ್ ಅವರಿಗೆ ಸೇರಿದ ಕೆಎ–21–ಸಿ–4326 ಸಂಖ್ಯೆಯನ್ನು ನಮೂದಿಸಿ ಸುಳ್ಳು ದಾಖಲೆ ಸೃಷ್ಟಿಸಿರುವುದು ಬೆಳಕಿಗೆ ಬಂದಿದೆ.
ಈ ನಕಲಿ ಇ–ಪಾಸ್ ಅನ್ನು ರೈಟರ್ ಅಜಿತ್ ಮೂಲಕ ಚಾಲಕನಿಗೆ ನೀಡಿ ಕಲ್ಲು ಸಾಗಾಟಕ್ಕೆ ವ್ಯವಸ್ಥೆ ಮಾಡಲಾಗಿತ್ತು. ಪೊಲೀಸರು ಲಾರಿಯನ್ನು ತಡೆದು ವಿಚಾರಣೆ ನಡೆಸಿದ ಬಳಿಕ ಮತ್ತೊಂದು ಹೊಸ ಇ–ಪಾಸ್ ಕಳುಹಿಸಿ ವಂಚನೆ ಮಾಡಲು ಯತ್ನಿಸಿರುವುದೂ ಪತ್ತೆಯಾಗಿದೆ.
ಪ್ರಕರಣ ಸಂಬಂಧ ನಾಲ್ವರನ್ನು ಬಂಧಿಸಿ, ಲಾರಿ ಹಾಗೂ ಕೆಂಪುಕಲ್ಲುಗಳನ್ನು ಮುಂದಿನ ಕಾನೂನು ಕ್ರಮಕ್ಕಾಗಿ ವಶಕ್ಕೆ ಪಡೆಯಲಾಗಿದೆ. ಪುತ್ತೂರು ಗ್ರಾಮಾಂತರ ಠಾಣೆಯಲ್ಲಿ ವಿವಿಧ ಕಲಂಗಳಡಿ ಪ್ರಕರಣ ದಾಖಲಾಗಿದೆ. ಆರೋಪಿಗಳನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು, ಜಾಮೀನಿನ ಮೇಲೆ ಬಿಡುಗಡೆ ಮಾಡಲಾಗಿದೆ.

Leave a Reply

Your email address will not be published. Required fields are marked *

Join WhatsApp Group
error: Content is protected !!