ವಿಟ್ಲ: ಕ್ಷುಲ್ಲಕ ವಿಚಾರಕ್ಕೆ ಸಂಬಂಧಿಸಿದಂತೆ ವಿದ್ಯಾರ್ಥಿಗಳ ನಡುವೆ ಉಂಟಾದ ವಾಗ್ವಾದ ಚೂರಿ ಇರಿತಕ್ಕೆ ತಿರುಗಿದ ಘಟನೆ ಪಟ್ಟಣದ ಖಾಸಗಿ ಐಟಿಐ ಸಂಸ್ಥೆಯಲ್ಲಿ ಮಂಗಳವಾರ ಬೆಳಿಗ್ಗೆ ಸಂಭವಿಸಿದೆ.
ಪ್ರಥಮ ವರ್ಷದ ವಿದ್ಯಾರ್ಥಿ ಮೊಹಮ್ಮದ್ ರಿಜ್ವಾನ್ (18) ಅವರಿಗೆ ಸಹಪಾಠಿ ಹೇಮಂತ್ (19) ಚೂರಿಯಿಂದ ಇರಿದಿರುವುದಾಗಿ ಪೊಲೀಸ್ ಮೂಲಗಳು ತಿಳಿಸಿವೆ. ಈ ವೇಳೆ ಗಲಾಟೆ ತಡೆಯಲು ಮುಂದಾದ ಅದೇ ತರಗತಿಯ ವಿದ್ಯಾರ್ಥಿ ಯಜೇಶ್ (18) ಅವರಿಗೂ ಗಾಯಗಳಾಗಿವೆ.
ವಿದ್ಯಾರ್ಥಿಗಳ ನಡುವಿನ ವೈಯಕ್ತಿಕ ವಿಷಯವನ್ನು ಗೇಲಿ ಮಾಡಿದ ಹಿನ್ನೆಲೆಯಲ್ಲಿ ಮಾತಿನ ಚಕಮಕಿ ಆರಂಭವಾಗಿ, ಬಳಿಕ ತರಗತಿಯೊಳಗೆ ಪರಸ್ಪರ ಬಡಿದಾಟಕ್ಕೆ ತಿರುಗಿದೆ ಎನ್ನಲಾಗಿದೆ. ಘಟನೆ ನಂತರ ಗಾಯಗೊಂಡ ವಿದ್ಯಾರ್ಥಿಗಳನ್ನು ತಕ್ಷಣ ಆಸ್ಪತ್ರೆಗೆ ದಾಖಲಿಸಲಾಗಿದೆ. ಇವರಲ್ಲಿ ಇಬ್ಬರನ್ನು ವಿಟ್ಲ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಚಿಕಿತ್ಸೆಗೆ ದಾಖಲಿಸಲಾಗಿದೆ.
ಸುದ್ದಿ ತಿಳಿದು ವಿಟ್ಲ ಪೊಲೀಸ್ ಠಾಣೆಯ ಇನ್ಸ್‌ಪೆಕ್ಟರ್ ಪ್ರಕಾಶ್ ದೇವಾಡಿಗ ಅವರ ನೇತೃತ್ವದ ಪೊಲೀಸರ ತಂಡ ಸ್ಥಳಕ್ಕೆ ಭೇಟಿ ನೀಡಿ ಮಾಹಿತಿ ಸಂಗ್ರಹಿಸಿದೆ. ಪ್ರಕರಣ ಸಂಬಂಧ ಆರೋಪಿ ವಿದ್ಯಾರ್ಥಿಯನ್ನು ಪೊಲೀಸರ ವಶಕ್ಕೆ ಪಡೆದುಕೊಂಡು ತನಿಖೆ ಮುಂದುವರಿಸಲಾಗಿದೆ.
ಘಟನೆ ಕುರಿತು ಹೆಚ್ಚಿನ ಪರಿಶೀಲನೆ ನಡೆಯುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.

Leave a Reply

Your email address will not be published. Required fields are marked *

Join WhatsApp Group
error: Content is protected !!