
ಮಂಗಳೂರು: ಬೆಂಗಳೂರು ನಗರದಿಂದ ನಿಷೇಧಿತ ಮಾದಕ ವಸ್ತು ಎಂಡಿಎಂಎ ಖರೀದಿಸಿ ಮಂಗಳೂರು ನಗರದಲ್ಲಿ ಮಾರಾಟ ಮಾಡಲು ಯತ್ನಿಸುತ್ತಿದ್ದ ಮೂವರನ್ನು ಮಂಗಳೂರು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ.
ಮಂಗಳೂರು ನಗರ ಹಾಗೂ ವಿದ್ಯಾರ್ಥಿಗಳಿಗೆ ಎಂಡಿಎಂಎ ಮಾರಾಟ ಮಾಡುತ್ತಿರುವ ಬಗ್ಗೆ ಖಚಿತ ಮಾಹಿತಿ ಪಡೆದ ಸಿಸಿಬಿ ಪೊಲೀಸರು ಫೆ.12, 2026ರಂದು ಉಳ್ಳಾಲ ತಾಲೂಕಿನ ತಲಪಾಡಿ ಪರಿಸರದಲ್ಲಿ ಕಾರ್ಯಾಚರಣೆ ನಡೆಸಿ, ಬೂದು ಬಣ್ಣದ ಸ್ವಿಫ್ಟ್ ಕಾರಿನಲ್ಲಿ ಮಾದಕ ವಸ್ತು ಸಾಗಾಟ ಮಾಡುತ್ತಿದ್ದವರನ್ನು ವಶಕ್ಕೆ ಪಡೆದರು.
ಬಂಧಿತರನ್ನು ಮುಸ್ತಫಾ ಸೀದಿಯಬ್ಬ (34), ಮೈಯದ್ದಿ (28) ಮತ್ತು ಮೊಹಮ್ಮದ್ ಶಿಫಾನ್ (28) ಎಂದು ಗುರುತಿಸಲಾಗಿದೆ. ಇವರು ಉಳ್ಳಾಲ ಪ್ರದೇಶದ ನಿವಾಸಿಗಳಾಗಿದ್ದಾರೆ.
ಆರೋಪಿಗಳ ವಶದಿಂದ ₹11.90 ಲಕ್ಷ ಮೌಲ್ಯದ 118.13 ಗ್ರಾಂ ಎಂಡಿಎಂಎ, ನಾಲ್ಕು ಮೊಬೈಲ್ ಫೋನ್‌ಗಳು ಹಾಗೂ KA-19-MQ-3420 ಸಂಖ್ಯೆಯ ಸ್ವಿಫ್ಟ್ ಕಾರು ಸೇರಿದಂತೆ ಒಟ್ಟು ₹17.95 ಲಕ್ಷ ಮೌಲ್ಯದ ವಸ್ತುಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.
ಈ ಕುರಿತು ಉಳ್ಳಾಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಬಂಧಿತ ಮುಸ್ತಫಾ ಸೀದಿಯಬ್ಬ ವಿರುದ್ಧ ಕಂಕನಾಡಿ ನಗರ ಠಾಣೆಯಲ್ಲಿ ದನ ಕಳ್ಳತನ ಪ್ರಕರಣ ಹಾಗೂ ಮೈಯದ್ದಿ ವಿರುದ್ಧ ಉಳ್ಳಾಲ ಠಾಣಾ ವ್ಯಾಪ್ತಿಯಲ್ಲಿ ಹಲ್ಲೆ ಪ್ರಕರಣ ದಾಖಲಾಗಿರುವುದಾಗಿ ಪೊಲೀಸರು ತಿಳಿಸಿದ್ದಾರೆ.
ಮಾದಕ ವಸ್ತು ಸಾಗಾಟ ಮತ್ತು ಮಾರಾಟ ಜಾಲದಲ್ಲಿ ಇನ್ನೂ ಹಲವರು ಭಾಗಿಯಾಗಿರುವ ಶಂಕೆ ಇದ್ದು, ಆರೋಪಿಗಳ ಪತ್ತೆಗೆ ತನಿಖೆ ಮುಂದುವರೆದಿದೆ. ಕಾರ್ಯಾಚರಣೆಯಲ್ಲಿ ಸಿಸಿಬಿ ಘಟಕದ ಅಧಿಕಾರಿಗಳು ಮತ್ತು ಸಿಬ್ಬಂದಿ ಭಾಗವಹಿಸಿದ್ದರು.







