
ಪುತ್ತೂರು: ಇನ್ಸುರೆನ್ಸ್ ಹೆಸರಿನಲ್ಲಿ ಕರೆ ಮಾಡಿ ಕ್ರೆಡಿಟ್ ಕಾರ್ಡ್ ವಿವರ ಮತ್ತು ಓಟಿಪಿ ಪಡೆದು ₹2.37 ಲಕ್ಷ ವಂಚನೆ ನಡೆಸಿದ ಪ್ರಕರಣದಲ್ಲಿ ಆರೋಪಿಯನ್ನು ದಕ್ಷಿಣ ಕನ್ನಡ ಜಿಲ್ಲಾ ಸೈಬರ್ ಅಪರಾಧ ಪೊಲೀಸರು ಬಂಧಿಸಿದ್ದಾರೆ.
ಪುತ್ತೂರು ನಿವಾಸಿ ಯಶೋಧರ ಅವರಿಗೆ ಅಪರಿಚಿತ ವ್ಯಕ್ತಿ ವಿವಿಧ ಮೊಬೈಲ್ ಸಂಖ್ಯೆಗಳ ಮೂಲಕ ಕರೆ ಮಾಡಿ, ತಾನು ಇನ್ಸುರೆನ್ಸ್ ಕಂಪೆನಿಯಿಂದ ಮಾತನಾಡುತ್ತಿರುವುದಾಗಿ ಹೇಳಿ ಪಾಲಿಸಿ ಮಾಡಿಸಿಕೊಡುವುದಾಗಿ ತಿಳಿಸಿದ್ದನು. ಇದನ್ನು ಪಿರ್ಯಾದಿದಾರರು ನಿರಾಕರಿಸಿದ ಬಳಿಕ ಪಾಲಿಸಿ ರದ್ದು ಮಾಡುವುದಾಗಿ ಹೇಳಿ ಕ್ರೆಡಿಟ್ ಕಾರ್ಡ್ ಸಂಖ್ಯೆ ಹಾಗೂ ಓಟಿಪಿ ಪಡೆದು, ಅವರ ಖಾತೆಯಿಂದ ₹2,37,036 ಹಣವನ್ನು ಬೇರೆ ಖಾತೆಗೆ ವರ್ಗಾಯಿಸಿದ್ದಾನೆ ಎಂದು ದೂರಿನಲ್ಲಿ ತಿಳಿಸಲಾಗಿದೆ.
ಈ ಕುರಿತು ದಕ್ಷಿಣ ಕನ್ನಡ ಜಿಲ್ಲಾ ಸೈಬರ್ ಅಪರಾಧ ಪೊಲೀಸ್ ಠಾಣೆಯಲ್ಲಿ ಅ.ಕ್ರ. 52/2025ರಡಿ ಐಟಿ ಕಾಯ್ದೆ 66(D) ಮತ್ತು ಬಿಎನ್‌ಎಸ್ ಕಲಂ 318(4), 319(2)ರಂತೆ ಪ್ರಕರಣ ದಾಖಲಿಸಿ ತನಿಖೆ ನಡೆಸಲಾಗಿತ್ತು.
ತನಿಖೆಯ ವೇಳೆ ಮಹಾರಾಷ್ಟ್ರ ಮೂಲದ ಹಾಗೂ ಪ್ರಸ್ತುತ ಮಂಡ್ಯ ಜಿಲ್ಲೆಯ ಕೃಷ್ಣರಾಜಪೇಟೆಯಲ್ಲಿ ವಾಸಿಸುತ್ತಿರುವ ಅವಿನಾಶ್ ರಮೇಶ್ ಗೌಡ (24) ಎಂಬಾತನನ್ನು ಫೆ. 11, 2026ರಂದು ದಸ್ತಗಿರಿ ಮಾಡಲಾಗಿದೆ. ಆರೋಪಿಯನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು, ನ್ಯಾಯಾಂಗ ಬಂಧನ ವಿಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.






