
ಪುತ್ತೂರು, ಫೆ.18: ಪುತ್ತೂರು ಕಡೆಯಿಂದ ಸುಳ್ಯ ಕಡೆಗೆ ಅಕ್ರಮವಾಗಿ ಎಂಡಿಎಮ್ಎ (MDMA) ಮಾದಕವಸ್ತು ಸಾಗಾಟ ಮಾಡುತ್ತಿದ್ದ ವಾಹನವನ್ನು ತಡೆದು ಪರಿಶೀಲಿಸಿದ ವೇಳೆ ಅಂತರ್‌ರಾಜ್ಯ ಮಾದಕ ಜಾಲಕ್ಕೆ ಸೇರಿದ ಮೂವರನ್ನು ಪೊಲೀಸರು ಬಂಧಿಸಿದ್ದಾರೆ.
ಬಂಧಿತರನ್ನು ಕೋಝಿಕೋಡ್ (ಕೇರಳ) ಮೂಲದ ಮುಹಮ್ಮದ್ ಅಜ್ಮಲ್ ಸಿ @ ಅಜ್ಜು (30), ವಯನಾಡ್ ಜಿಲ್ಲೆಯ ಇಸ್ಮಾಯಿಲ್ (28) ಹಾಗೂ ಕೋಝಿಕೋಡ್‌ನ ಸಂಶೀರ್ (27) ಎಂದು ಗುರುತಿಸಲಾಗಿದೆ.
ಪರಿಶೀಲನೆ ವೇಳೆ ಆರೋಪಿಗಳು ವಾಹನದಲ್ಲಿ ಮಾರಕಾಸ್ತ್ರವಾದ ತಲವಾರನ್ನು ಇಟ್ಟುಕೊಂಡಿದ್ದು, ಸುಮಾರು ₹5,38,800 ಮೌಲ್ಯದ 53.58 ಗ್ರಾಂ ಎಂಡಿಎಮ್ಎ ನಿಷೇಧಿತ ಮಾದಕವಸ್ತುವನ್ನು ಮಾರಾಟ ಉದ್ದೇಶದಿಂದ ವಶದಲ್ಲಿಟ್ಟಿರುವುದು ಪತ್ತೆಯಾಗಿದೆ. ಆರೋಪಿಗಳಿಂದ ಕಾರು, ತಲವಾರು, ಮೊಬೈಲ್ ಫೋನ್‌ಗಳು ಹಾಗೂ ₹10,000 ನಗದು ವಶಪಡಿಸಿಕೊಳ್ಳಲಾಗಿದೆ.
ಈ ಸಂಬಂಧ ಪುತ್ತೂರು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಅ.ಕ್ರ.25/2026ರಲ್ಲಿ ಎನ್‌ಡಿಪಿಎಸ್ ಕಾಯ್ದೆ 1985ರ ಕಲಂ 8(C), 22(C), 29 ಹಾಗೂ ಅಸ್ತ್ರ ಕಾಯ್ದೆ 25(1B)(B)ರಂತೆ ಪ್ರಕರಣ ದಾಖಲಿಸಿ ಆರೋಪಿಗಳನ್ನು ದಸ್ತಗಿರಿ ಮಾಡಿ ತನಿಖೆ ಮುಂದುವರಿಸಲಾಗಿದೆ.
ಪೊಲೀಸ್ ಮಾಹಿತಿ ಪ್ರಕಾರ, ಆರೋಪಿಗಳು ಕೇರಳ, ಗೋವಾ ಹಾಗೂ ಕರ್ನಾಟಕ ರಾಜ್ಯಗಳಿಗೆ ಮಾದಕವಸ್ತು ಸರಬರಾಜು ಮಾಡುತ್ತಿದ್ದು, ಕೇರಳದ ಕೋಝಿಕೋಡ್, ಕಣ್ಣೂರು ಮತ್ತು ವಯನಾಡ್ ಜಿಲ್ಲೆಗಳಲ್ಲಿ ಪ್ರಕರಣಗಳು ದಾಖಲಾಗಿದ್ದು ತಲೆಮರೆಸಿಕೊಂಡಿದ್ದರು. ಮುಹಮ್ಮದ್ ಅಜ್ಮಲ್ ಸಿ @ ಅಜ್ಜು ಪುತ್ತೂರು ಗ್ರಾಮಾಂತರ ಠಾಣೆಯಲ್ಲಿ ದಾಖಲಾಗಿರುವ ಅ.ಕ್ರ.04/2026 (ಕಲಂ 8C, 21(b) ಎನ್‌ಡಿಪಿಎಸ್ ಕಾಯ್ದೆ) ಪ್ರಕರಣದ ಆರೋಪಿಯಾಗಿದ್ದಾನೆ. ಇಸ್ಮಾಯಿಲ್ ವಿರುದ್ಧವೂ ಕೇರಳದ ಕೋಝಿಕೋಡ್ ಜಿಲ್ಲೆಯಲ್ಲಿ ಮಾದಕವಸ್ತು ಸಾಗಾಟ ಪ್ರಕರಣ ದಾಖಲಾಗಿದೆ.
ಪ್ರಕರಣ ಪತ್ತೆ ಕಾರ್ಯದಲ್ಲಿ ಪುತ್ತೂರು ಉಪ ವಿಭಾಗದ ಪೊಲೀಸ್ ಉಪಾಧೀಕ್ಷಕರಾದ ಶ್ರೀ ಪ್ರಮೋದ್ ಕುಮಾರ್, ಪುತ್ತೂರು ಗ್ರಾಮಾಂತರ ಠಾಣಾ ಪ್ರಭಾರಿ ಪೊಲೀಸ್ ನಿರೀಕ್ಷಕರಾದ ಸುನಿಲ್ ಕುಮಾರ್, ದ.ಕ ಜಿಲ್ಲಾ ಡಿ.ಎಸ್.ಬಿ ವಿಭಾಗದ ಪೊಲೀಸ್ ನಿರೀಕ್ಷಕರಾದ ನಂದಕುಮಾರ್, ಪುತ್ತೂರು ಗ್ರಾಮಾಂತರ ಠಾಣಾ ಉಪನಿರೀಕ್ಷಕರಾದ ಗುಣಪಾಲ ಹಾಗೂ ಸುಶ್ಮಾ ಜೆ. ಭಂಡಾರಿ, ವಿಶೇಷ ತಂಡದ ಸಿಬ್ಬಂದಿಗಳಾದ ಅದ್ರಾಮ, ಪ್ರಶಾಂತ್ ರೈ, ಪ್ರಶಾಂತ್ ಎಂ., ಪ್ರವೀಣ್ ರೈ, ಹರ್ಷಿತ್, ಪರಮೇಶ್ವರ ಗೌಡ, ಹರೀಶ್, ಸುಬ್ರಹ್ಮಣ್ಯ, ಬೀಮಸೇನ್, ಭವಿತ್ ರೈ, ನಾಗರಾಜ್, ಕಾರ್ತಿಕ್, ಜಿಲ್ಲಾ ಗಣಕ ಯಂತ್ರ ಸಿಬ್ಬಂದಿಗಳಾದ ದಿವಾಕರ್, ಸಂಪತ್ ಹಾಗೂ ಗೃಹ ರಕ್ಷಕ ಸಿಬ್ಬಂದಿಗಳು ಕಾರ್ಯನಿರ್ವಹಿಸಿದ್ದರು.







