ಮಂಗಳೂರು: ಹಲವು ಗಂಭೀರ ಅಪರಾಧ ಪ್ರಕರಣಗಳಲ್ಲಿ ಭಾಗಿಯಾಗಿ ಕಳೆದ ಸುಮಾರು ಒಂಬತ್ತು ವರ್ಷಗಳಿಂದ ತಲೆಮರೆಸಿಕೊಂಡಿದ್ದ ಕುಖ್ಯಾತ ರೌಡಿಶೀಟರ್ ಸಹ್ವಾನ್ ಹುಸೈನ್ (42)ರನ್ನು ಮಂಗಳೂರು ನಗರ ಸಿಸಿಬಿ ಪೊಲೀಸರು ಆಂಧ್ರಪ್ರದೇಶದ ರಾಯಚೋಟಿ ಪ್ರದೇಶದಲ್ಲಿ ಬಂಧಿಸಿ, ಮುಂದಿನ ಕ್ರಮಕ್ಕಾಗಿ ಮುಲ್ಕಿ ಪೊಲೀಸ್ ಠಾಣೆಗೆ ಹಸ್ತಾಂತರಿಸಿದ್ದಾರೆ.
ಸಹ್ವಾನ್ ಹುಸೈನ್, ದಿ. ಹಮ್ಮಬ್ಬ ಅವರ ಪುತ್ರ, ಮಂಗಳೂರು ತಾಲೂಕಿನ ಹಳೆಯಂಗಡಿ ಗ್ರಾಮದ ಕೊಪ್ಪಳ ಹೌಸ್ ನಿವಾಸಿಯಾಗಿದ್ದಾನೆ. ಮಂಗಳೂರು ನಗರ ಪೊಲೀಸ್ ಕಮಿಷನರೇಟ್ ಹಾಗೂ ಉಡುಪಿ ಜಿಲ್ಲೆ ವ್ಯಾಪ್ತಿಯ ವಿವಿಧ ಪೊಲೀಸ್ ಠಾಣೆಗಳಲ್ಲಿ ದಾಖಲಾಗಿರುವ 31ಕ್ಕೂ ಹೆಚ್ಚು ಪ್ರಕರಣಗಳಲ್ಲಿ ಈತನ ವಿರುದ್ಧ ಆರೋಪಗಳಿವೆ. ಇವುಗಳಲ್ಲಿ ಎರಡು ಕೊಲೆ, ನಾಲ್ಕು ಕೊಲೆಯತ್ನ, ಗ್ಯಾಂಗ್ ರೇಪ್, ಐದು ದರೋಡೆ, ಅಪಹರಣ, ಸುಲಿಗೆ, ಪೊಲೀಸ್ ಅಧಿಕಾರಿಗಳ ಮೇಲೆ ಹಲ್ಲೆ, ಕಳ್ಳತನ, ನರಗಳ್ಳತನ, ಜೈಲಿನಲ್ಲಿ ಸಹ ಖೈದಿಗಳ ಮೇಲೆ ಹಲ್ಲೆ, ಅಕ್ರಮ ಕೂಟ ಸೇರಿ ಹಲ್ಲೆ, ಕೊಲೆ ಬೆದರಿಕೆ, ಕರ್ತವ್ಯಕ್ಕೆ ಅಡ್ಡಿ, ದರೋಡೆಗೆ ಸಂಚು ಸೇರಿದಂತೆ ಅನೇಕ ಗಂಭೀರ ಪ್ರಕರಣಗಳು ಸೇರಿವೆ.
ಮುಲ್ಕಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ 2008ರಲ್ಲಿ ದಾಖಲಾಗಿದ್ದ ಪ್ರವೀಣ್ ಅಪಹರಣ, ದರೋಡೆ ಮತ್ತು ಕೊಲೆ ಪ್ರಕರಣದಲ್ಲಿ 28-02-2020ರಂದು ಮಾನ್ಯ ಹೈಕೋರ್ಟ್ ಜೀವಾವಧಿ ಶಿಕ್ಷೆ ವಿಧಿಸಿತ್ತು. ಇದೇ ವೇಳೆ, ಕಾರ್ಕಳ ಠಾಣಾ ವ್ಯಾಪ್ತಿಯ 2008ರ ದರೋಡೆ ಪ್ರಕರಣದಲ್ಲಿ ಮೂರು ವರ್ಷಗಳ ಶಿಕ್ಷೆ ಕೂಡ ವಿಧಿಸಲಾಗಿತ್ತು. ಈತನ ವಿರುದ್ಧ 12 ಪ್ರಕರಣಗಳು ನ್ಯಾಯಾಲಯದಲ್ಲಿ ವಿಚಾರಣಾ ಹಂತದಲ್ಲಿದ್ದು, ವಿವಿಧ ನ್ಯಾಯಾಲಯಗಳಿಂದ ದಸ್ತಗಿರಿ ವಾರಂಟ್‌ಗಳು ಜಾರಿಯಲ್ಲಿವೆ. ಐದು ಪ್ರಕರಣಗಳಲ್ಲಿ ನ್ಯಾಯಾಲಯವು ಎಲ್‌ಪಿಸಿ (Long Pending Case) ಎಂದು ಘೋಷಿಸಿದೆ.
2017ರಲ್ಲಿ ಸುರತ್ಕಲ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಲೆಪ್ಪಿ ಸಹ್ವಾನ್ ಎಂಬಾತನ ಅಪಹರಣ ಮತ್ತು ಹತ್ಯೆ ಪ್ರಕರಣದಲ್ಲಿ ನೇರವಾಗಿ ಭಾಗಿಯಾಗಿದ್ದ ಈತನು, ಆಗುಂಬೆ ಘಾಟಿಯಲ್ಲಿ ಶವ ಎಸೆದು ಪರಾರಿಯಾಗಿದ್ದನು. ಬಳಿಕ ಆಂಧ್ರಪ್ರದೇಶದ ರಾಯಚೋಟಿಯಲ್ಲಿ ‘ಉಮ್ಮರ್ ಮೊಹಮ್ಮದ್ ನಾಸಿರ್’ ಎಂಬ ನಕಲಿ ಹೆಸರಿನಲ್ಲಿ ಆಧಾರ್ ಕಾರ್ಡ್ ಹಾಗೂ ಪಾಸ್‌ಪೋರ್ಟ್ ಪಡೆದು 2018ರಿಂದ ವಿದೇಶಕ್ಕೆ ಪರಾರಿಯಾಗಿದ್ದನೆಂದು ಪೊಲೀಸರು ತಿಳಿಸಿದ್ದಾರೆ. ವಿದೇಶದಲ್ಲಿದ್ದ ಸಂದರ್ಭದಲ್ಲೂ ಮಂಗಳೂರು ಮೂಲದ ಉದ್ಯಮಿಗಳನ್ನು ಬೆದರಿಸಿ ಬಲವಂತವಾಗಿ ಹಣ ವಸೂಲಿ (ಎಕ್ಸ್‌ಟೋರ್ಷನ್) ಮಾಡಿದ ಬಗ್ಗೆ ದೂರುಗಳು ಬಂದಿವೆ.
ಪ್ರಸ್ತುತ ಆರೋಪಿ ಬಂಧನದೊಂದಿಗೆ, ತಲೆಮರೆಸಿಕೊಳ್ಳಲು ಸಹಾಯ ಮಾಡಿದವರು ಹಾಗೂ ನಕಲಿ ದಾಖಲೆ, ಪಾಸ್‌ಪೋರ್ಟ್ ಸಿದ್ಧಪಡಿಸಲು ನೆರವಾದವರನ್ನು ಪತ್ತೆಹಚ್ಚಿ ತನಿಖೆ ನಡೆಸಲಾಗುವುದು ಎಂದು ಪೊಲೀಸರು ತಿಳಿಸಿದ್ದಾರೆ.

Leave a Reply

Your email address will not be published. Required fields are marked *

Join WhatsApp Group
error: Content is protected !!