
ಬಳ್ಳಾರಿ: ಹಣಕಾಸಿನ ವಿಚಾರದಲ್ಲಿ ಉಂಟಾದ ಭಿನ್ನಾಭಿಪ್ರಾಯದಿಂದ ಮಂಗಳಮುಖಿ ಮತ್ತು ಆಕೆಯ ಪ್ರಿಯತಮ ಸಾವನ್ನಪ್ಪಿರುವ ಘಟನೆ ಬಳ್ಳಾರಿಯಲ್ಲಿ ಬೆಳಕಿಗೆ ಬಂದಿದೆ. ನಗರದ ಮೇದಾರ ಕೇತಯ್ಯ ನಗರದಲ್ಲಿನ ಬಾಡಿಗೆ ಮನೆಯೊಂದರಲ್ಲಿ ಮಂಗಳಮುಖಿ ಸುಹಾಸಿನಿ (29) ಹಾಗೂ ಪ್ರಿಯಕರ ಶೇಖರ್/ರಾಜಶೇಖರ (27) ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದು, ಪ್ರಕರಣಕ್ಕೆ ಇದೀಗ ಹೊಸ ತಿರುವು ಸಿಕ್ಕಿದೆ.
ಪ್ರಾಥಮಿಕವಾಗಿ ಇಬ್ಬರೂ ಆತ್ಮ*ಹತ್ಯೆ ಮಾಡಿಕೊಂಡಿದ್ದಾರೆ ಎನ್ನಲಾಗಿದ್ದರೂ, ತನಿಖೆ ಮುಂದುವರಿದಂತೆ ಮಂಗಳಮುಖಿ ಸುಹಾಸಿನಿಯನ್ನು ಕೊಲೆ ಮಾಡಿ ನಂತರ ಶೇಖರ್ ಸಾವಿಗೆ ಶರಣಾಗಿರುಬಹುದೆಂಬ ಶಂಕೆಯನ್ನು ಪೊಲೀಸರು ವ್ಯಕ್ತಪಡಿಸಿದ್ದಾರೆ. ಘಟನೆಯ ಬಗ್ಗೆ ನಿಖರ ಕಾರಣ ಇನ್ನೂ ದೃಢಪಟ್ಟಿಲ್ಲ.
ಐದು ವರ್ಷಗಳ ಪ್ರೀತಿ, ಹಣಕಾಸಿನ ವಿಚಾರದಲ್ಲಿ ಬಿರುಕು
ಮೂಲತಃ ಬಳ್ಳಾರಿ ತಾಲೂಕಿನ ಚಾಗನೂರು ಗ್ರಾಮದ ಸುಹಾಸಿನಿ, ಮಂಗಳಮುಖಿಯಾದ ಬಳಿಕ ಕಳೆದ ಆರು ವರ್ಷಗಳಿಂದ ಕುಟುಂಬದಿಂದ ದೂರವಾಗಿ ವಾಸಿಸುತ್ತಿದ್ದಳು. ಹೊಸಪೇಟೆ ತಾಲೂಕಿನ ಮಲಪನಗುಡಿ ಗ್ರಾಮದ ಶೇಖರ್‌ನೊಂದಿಗೆ ಪರಿಚಯ ಬೆಳೆಸಿ, ಕಳೆದ ಐದು ವರ್ಷಗಳಿಂದ ಪರಸ್ಪರ ಪ್ರೀತಿಯಲ್ಲಿ ಇದ್ದರು. ಮಾತ್ರವಲ್ಲ ಇಬ್ಬರೂ ಕೆಲಕಾಲ ಹೊಸಪೇಟೆಯಲ್ಲಿ ಒಟ್ಟಿಗೆ ಜೀವನ ನಡೆಸುತ್ತಿದ್ದರು.
ಸುಹಾಸಿನಿ ತನ್ನ ದುಡಿಮೆಯಿಂದ ಶೇಖರ್‌ಗೆ ಆಟೋ ಕೊಡಿಸಿದ್ದಾಳೆ ಎನ್ನಲಾಗಿದ್ದು, ಅದರಿಂದ ಇಬ್ಬರೂ ಜೀವನ ಸಾಗಿಸುತ್ತಿದ್ದರು. ಆದರೆ ಇತ್ತೀಚಿನ ದಿನಗಳಲ್ಲಿ ಹಣಕಾಸಿನ ವಿಚಾರದಲ್ಲಿ ಇಬ್ಬರ ನಡುವೆ ಸಣ್ಣಪುಟ್ಟ ಜಗಳಗಳು ನಡೆದಿದ್ದವು ಎಂದು ಸ್ಥಳೀಯರು ತಿಳಿಸಿದ್ದಾರೆ. ಈ ಹಿಂದೆಯೂ ಇಬ್ಬರೂ ಕೆಲಕಾಲ ದೂರವಾಗಿದ್ದರು. ಬಳಿಕ ರಾಜಿ ಮಾಡಿಕೊಂಡು ಜೊತೆಗೆ ವಾಸಿಸುತ್ತಿದ್ದರು.
ಹಂಪಿ ಉತ್ಸವದಲ್ಲಿ ಭಿಕ್ಷೆ ಬೇಡಿ ಬಂದ ಬಳಿಕ ದುರ್ಘಟನೆ
ಪ್ರತಿ ಮಂಗಳವಾರ ಬಳ್ಳಾರಿಯ ದುರ್ಗಮ್ಮ ದೇವಸ್ಥಾನಕ್ಕೆ ಬಂದು ಹೋಗುತ್ತಿದ್ದ ಈ ಜೋಡಿ, ಇತ್ತೀಚೆಗೆ ಹಂಪಿ ಉತ್ಸವದಲ್ಲಿ ಭಿಕ್ಷೆ ಬೇಡಿದ ಬಳಿಕ ಸೋಮವಾರ ಮಧ್ಯಾಹ್ನ ಬಳ್ಳಾರಿಗೆ ಬಂದಿದ್ದರು. ವಾರದ ರೂಢಿಯಂತೆ ಮೇದಾರ ಕೇತಯ್ಯ ನಗರದಲ್ಲಿನ ಎಂ.ಕೆ. ನಗರದ ಬಾಡಿಗೆ ಮನೆಗೆ ತೆರಳಿದ ಬಳಿಕ, ಅಲ್ಲಿಯೇ ಈ ದುರ್ಘಟನೆ ನಡೆದಿದೆ. ಮಂಗಳವಾರ ಬೆಳಿಗ್ಗೆ ಮನೆಯೊಳಗೆ ಇಬ್ಬರೂ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದು, ವಿಷಯ ತಿಳಿದ ತಕ್ಷಣ ಪೊಲೀಸರು ಸ್ಥಳಕ್ಕೆ ಧಾವಿಸಿ ಪರಿಶೀಲನೆ ನಡೆಸಿದರು.
ಕೊಲೆ ಮಾಡಿ ಬಳಿಕ ಸಾವನ್ನಪ್ಪಿರುವ ಶಂಕೆ, ತನಿಖೆ ತೀವ್ರ
ಪೊಲೀಸರ ಪ್ರಾಥಮಿಕ ಪರಿಶೀಲನೆಯಲ್ಲಿ, ಮೊದಲು ಸುಹಾಸಿನಿಯನ್ನು ಕೊಲೆ ಮಾಡಿ ನಂತರ ಶೇಖರ್ ಆತ್ಮ*ಹತ್ಯೆ ಮಾಡಿಕೊಂಡಿರಬಹುದೆಂಬ ಅನುಮಾನ ವ್ಯಕ್ತವಾಗಿದೆ. ನಿನ್ನೆ ರಾತ್ರಿ ಶೇಖರ್ ಸುಹಾಸಿನಿ ವಾಸವಿದ್ದ ಮನೆಗೆ ಬಂದಿದ್ದು, ಅವರ ನಡುವೆ ಜಗಳ ನಡೆದು ಬಳಿಕ ಸಾವಿನವರೆಗೆ ಇದು ಹೋಗಿದೆ. ಆದರೆ ಘಟನೆಯ ನಿಖರ ಹಿನ್ನೆಲೆ ಹಾಗೂ ಕಾರಣಗಳು ಮರಣೋತ್ತರ ಪರೀಕ್ಷೆ ಮತ್ತು ತನಿಖೆಯ ಬಳಿಕವೇ ಸ್ಪಷ್ಟವಾಗಲಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಈ ಕುರಿತು ಬ್ರೂಸ್ ಪೇಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಎಲ್ಲ ಆಯಾಮಗಳಿಂದ ತನಿಖೆ ಮುಂದುವರಿಸಿದ್ದಾರೆ. ಸುತ್ತಮುತ್ತಲವರ ಹೇಳಿಕೆ, ಮೊಬೈಲ್ ಕರೆ ವಿವರಗಳು ಹಾಗೂ ಹಣಕಾಸಿನ ವ್ಯವಹಾರಗಳನ್ನೂ ಪರಿಶೀಲಿಸಲಾಗುತ್ತಿದೆ. ಪ್ರೀತಿ, ನಂಬಿಕೆ ಮತ್ತು ಹಣಕಾಸಿನ ಬಿರುಕುಗಳ ನಡುವೆ ಸಂಭವಿಸಿದ ಈ ದುರ್ಘಟನೆ ಬಳ್ಳಾರಿಯಲ್ಲಿ ತೀವ್ರ ಚರ್ಚೆಗೆ ಕಾರಣವಾಗಿದ್ದು, ತನಿಖೆಯಿಂದ ಸತ್ಯಾಂಶ ಹೊರಬೀಳಬೇಕೆಂಬುದು ಸಾರ್ವಜನಿಕರ ನಿರೀಕ್ಷೆಯಾಗಿದೆ.a







