
ಬಂಟ್ವಾಳ: ಗಾಂಜಾ ಮಾರಾಟಕ್ಕೆ ಯತ್ನಿಸುತ್ತಿದ್ದ ವ್ಯಕ್ತಿಯನ್ನು ಬಂಟ್ವಾಳ ಗ್ರಾಮಾಂತರ ಪೊಲೀಸರು ಬಂಧಿಸಿದ್ದು, ಆತನಿಂದ 180 ಗ್ರಾಂ ಗಾಂಜಾ ವಶಪಡಿಸಿಕೊಂಡಿದ್ದಾರೆ.
ಫೆ. 19ರಂದು ಮಧ್ಯಾಹ್ನ ಬಂಟ್ವಾಳ ತಾಲೂಕು ಕೊಡ್ಮಾಣು ಗ್ರಾಮದ ಪಕ್ಕಳಪಾದೆ ಪ್ರದೇಶದ ರಸ್ತೆ ಬದಿಯ ನಿರ್ಜನ ಸ್ಥಳದಲ್ಲಿ ವ್ಯಕ್ತಿಯೊಬ್ಬನು ನಿಷೇಧಿತ ಮಾದಕ ವಸ್ತುವನ್ನು ಮಾರಾಟ ಮಾಡುವ ಉದ್ದೇಶದಿಂದ ಅಕ್ರಮವಾಗಿ ವಶದಲ್ಲಿಟ್ಟುಕೊಂಡಿದ್ದಾನೆ ಎಂಬ ಮಾಹಿತಿ ಪೊಲೀಸರಿಗೆ ಲಭಿಸಿತ್ತು.
ಈ ಮಾಹಿತಿ ಮೇರೆಗೆ ಪೊಲೀಸ್ ಉಪ ನಿರೀಕ್ಷಕ (ಕಾ&ಸು) ಮಂಜುನಾಥ ಟಿ ಅವರು ಸಿಬ್ಬಂದಿಗಳೊಂದಿಗೆ ಸ್ಥಳಕ್ಕೆ ತೆರಳಿ ಶಂಕಿತನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದರು. ಆತನು ಬಂಟ್ವಾಳ ಮೇರಮಜಲು ನಿವಾಸಿ ಪ್ರಶಾಂತ್ @ ಪ್ರಸಾದ್ (30) ಎಂದು ಗುರುತಿಸಲಾಗಿದೆ. ಗಾಂಜಾವನ್ನು ಗಿರಾಕಿಗಳಿಗೆ ಮಾರಾಟ ಮಾಡಲು ತಂದಿರುವುದಾಗಿ ಆತ ಒಪ್ಪಿಕೊಂಡಿದ್ದಾನೆ.
ತಪಾಸಣೆ ವೇಳೆ ಆತನ ಬಳಿ 180 ಗ್ರಾಂ ಗಾಂಜಾ ಪತ್ತೆಯಾಗಿದೆ. ಈ ಗಾಂಜಾವನ್ನು ಬಂಟ್ವಾಳದ ಪಲ್ಲಮಜಲು ನಿವಾಸಿ ಅಬ್ದುಲ್ ರಜಾಕ್ ಮಾರಾಟ ಮಾಡಲು ನೀಡಿದ್ದಾನೆ ಎಂದು ಆರೋಪಿತನು ತಿಳಿಸಿದ್ದಾನೆ.
ಆರೋಪಿತನನ್ನು ಗಾಂಜಾ ಹಾಗೂ ಆತನ ಬಳಿಯಿದ್ದ ದ್ವಿಚಕ್ರ ವಾಹನ ಸಮೇತ ಸ್ವಾಧೀನಪಡಿಸಿಕೊಂಡು ಬಂಟ್ವಾಳ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಅ.ಕ್ರ. 19/2026 ಕಲಂ 8(C) r/w 20(b)(ii)(A) ಎನ್‌ಡಿಪಿಎಸ್ ಕಾಯ್ದೆ 1985ರ ಅಡಿಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.







