
ವಿಟ್ಲ: ಕೇರಳದಿಂದ ಅಕ್ರಮವಾಗಿ ಕೆಂಪುಕಲ್ಲುಗಳನ್ನು ಸಾಗಿಸುತ್ತಿದ್ದ ಎರಡು ಲಾರಿಗಳನ್ನು ವಿಟ್ಲ ಪೊಲೀಸರು ವಶಕ್ಕೆ ಪಡೆದು ಪ್ರಕರಣ ದಾಖಲಿಸಿದ್ದಾರೆ.
ಫೆ.25ರಂದು ಮಧ್ಯಾಹ್ನ, ಕೇರಳ ಕಡೆಯಿಂದ ಪೆರುವಾಯಿ ಮಾರ್ಗವಾಗಿ ಲಾರಿಗಳಲ್ಲಿ ಕೆಂಪುಕಲ್ಲುಗಳನ್ನು ಅಕ್ರಮವಾಗಿ ಕರ್ನಾಟಕಕ್ಕೆ ಸಾಗಾಟ ಮಾಡಲಾಗುತ್ತಿದೆ ಎಂಬ ಮಾಹಿತಿ ವಿಟ್ಲ ಪೊಲೀಸ್ ಠಾಣೆಯ ಪೊಲೀಸ್ ಉಪನಿರೀಕ್ಷಕ (ಕಾ&ಸು) ರಾಮಕೃಷ್ಣ ಅವರಿಗೆ ಲಭಿಸಿತು. ತಕ್ಷಣ ಸಿಬ್ಬಂದಿಗಳೊಂದಿಗೆ ಬಂಟ್ವಾಳ ತಾಲೂಕಿನ ಪೆರುವಾಯಿ ಗ್ರಾಮದ ಬೆರಿಪದವು ಬಳಿ ವಾಹನ ತಪಾಸಣೆ ನಡೆಸಿದರು.
ಈ ವೇಳೆ ಕೆಂಪುಕಲ್ಲುಗಳನ್ನು ತುಂಬಿಸಿಕೊಂಡು ಬರುತ್ತಿದ್ದ KA-21-C-0562 ಹಾಗೂ KA-12-A-2252 ನೋಂದಣಿಯ ಎರಡು ಲಾರಿಗಳನ್ನು ತಡೆದು ಪರಿಶೀಲಿಸಲಾಯಿತು. KA-21-C-0562 ಲಾರಿಯ ಚಾಲಕ ವಿಟ್ಲ ನಿವಾಸಿ ಸಾಧಿಕ್ (25) ಮತ್ತು KA-12-A-2252 ಲಾರಿಯ ಚಾಲಕ ವಿಟ್ಲ ನಿವಾಸಿ ಮೊಹಮ್ಮದ್ (46) ಎಂದು ಗುರುತಿಸಲಾಗಿದೆ.
ಪರಿಶೀಲನೆಯ ವೇಳೆ, ಸದರಿ ಕೆಂಪುಕಲ್ಲುಗಳನ್ನು ಕೇರಳದ ಧರ್ಮತ್ತಡ್ಕದಿಂದ ವೇಣು ಎಂಬವರು ತುಂಬಿಸಿ ಕಳುಹಿಸಿರುವುದಾಗಿ ತಿಳಿದುಬಂದಿದ್ದು, ಸಾಗಾಟಕ್ಕೆ ಸಂಬಂಧಿಸಿದ ಯಾವುದೇ ಪರವಾನಿಗೆ ಅಥವಾ ದಾಖಲಾತಿಗಳು ಇಲ್ಲದಿರುವುದು ಪತ್ತೆಯಾಯಿತು.
ಮುಂದಿನ ಕಾನೂನು ಕ್ರಮಕ್ಕಾಗಿ ಚಾಲಕರನ್ನು ವಶಕ್ಕೆ ಪಡೆದು, ಲೋಡ್ ಸಹಿತ ಲಾರಿಗಳನ್ನು ಸ್ವಾಧೀನಪಡಿಸಲಾಗಿದೆ. ಈ ಸಂಬಂಧ ವಿಟ್ಲ ಪೊಲೀಸ್ ಠಾಣೆಯಲ್ಲಿ ಅ.ಕ್ರ. 49/2026, ಭಾರತೀಯ ನ್ಯಾಯ ಸಂಹಿತೆ 2023ರ ಕಲಂ 303(2), ಗಣಿ ಮತ್ತು ಖನಿಜ (ಅಭಿವೃದ್ಧಿ ಮತ್ತು ನಿಯಂತ್ರಣ) ಕಾಯ್ದೆ 1957ರ ಕಲಂ 4(1), 21 ಹಾಗೂ ಕರ್ನಾಟಕ ಅಲ್ಪಖನಿಜ ಸಂರಕ್ಷಣೆ ನಿಯಮಗಳು 1994ರ ಕಲಂ 3, 44ರಡಿ ಪ್ರಕರಣ ದಾಖಲಿಸಿ ತನಿಖೆ ಮುಂದುವರಿಸಲಾಗಿದೆ.







