ಶಿವಮೊಗ್ಗದ ಸೂಳೆಬೈಲಿನಲ್ಲಿ ನಡೆದ ಬಾಲಕ ಸಂಕೇತ್‌ನ ಭೀಕರ ಹತ್ಯೆ ಪ್ರಕರಣ ಈಗ ಇಡೀ ಬಡಾವಣೆಯ ಆಕ್ರೋಶಕ್ಕೆ ಕಾರಣವಾಗಿದೆ. ಈ ಘಟನೆಯನ್ನು ಖಂಡಿಸಿ ಇಂದು ಹಿಂದೂ ಮತ್ತು ಮುಸ್ಲಿಂ ಸಮುದಾಯದವರು ಯಾವುದೇ ಭೇದವಿಲ್ಲದೆ ಒಗ್ಗಟ್ಟಾಗಿ ಬೀದಿಗೆ ಇಳಿದಿದ್ದಾರೆ.

ಹತ್ಯೆಗೀಡಾದ ಬಾಲಕ ಸಂಕೇತ್ ಭಾವಚಿತ್ರವಿರುವ ಬ್ಯಾನರ್ ಹಿಡಿದು, ಮುಂಬತ್ತಿ ಬೆಳಗುವ ಮೂಲಕ ಹತ್ಯೆಯನ್ನು ಖಂಡಿಸಿದ ಸ್ಥಳೀಯರು, ಬಡಾವಣೆಯಲ್ಲಿ ಶಾಂತಿ ನೆಲೆಸುವಂತೆ ಒತ್ತಾಯಿಸಿದರು.

ಏಳು ಅಪ್ರಾಪ್ತರಿಂದ ಬಾಲಕನ ಕೊಲೆ: ಅಕ್ರಮ ಚಟುವಟಿಕೆಗಳೇ ಮೂಲ ಕಾರಣ

ಕಳೆದ ಎರಡು ದಿನಗಳ ಹಿಂದೆ ಸೂಳೆಬೈಲಿನಲ್ಲಿ ಏಳು ಜನ ಅಪ್ರಾಪ್ತರು ಸೇರಿ ಸಂಕೇತ್ ಎಂಬ ಬಾಲಕನ ಮೇಲೆ ಹಲ್ಲೆ ನಡೆಸಿ ಹತ್ಯೆ ಮಾಡಿದ್ದರು. ಈ ಘೋರ ಕೃತ್ಯಕ್ಕೆ ಬಡಾವಣೆಯಲ್ಲಿ ಅವ್ಯಾಹತವಾಗಿ ನಡೆಯುತ್ತಿರುವ ಗಾಂಜಾ ಮಾರಾಟ ಮತ್ತು ಅಕ್ರಮ ಸಣ್ಣ ಸಣ್ಣ ಮದ್ಯದ ಅಂಗಡಿಗಳೇ ಮೂಲ ಕಾರಣ ಎಂದು ಸ್ಥಳೀಯರು ಗಂಭೀರವಾಗಿ ಆರೋಪಿಸಿದ್ದಾರೆ. ಅಮಾಯಕ ಯುವಕರನ್ನು ಬಲಿ ಪಡೆಯುತ್ತಿರುವ ಈ ಸಮಾಜಘಾತುಕ ಶಕ್ತಿಗಳ ವಿರುದ್ಧ ಪ್ರತಿಭಟನಾಕಾರರು ಕಿಡಿಕಾರಿದ್ದಾರೆ.

ಗಲ್ಲಿ ಗಲ್ಲಿಗೂ ಗಾಂಜಾ-ಮದ್ಯ: ಅಕ್ರಮ ಚಟುವಟಿಕೆಗೆ ಕಡಿವಾಣ ಯಾವಾಗ?

ಅಕ್ರಮವಾಗಿ ಸಿಗುತ್ತಿರುವ ಗಾಂಜಾ ಮತ್ತು ಮದ್ಯದಿಂದಾಗಿ ಸೂಳೆಬೈಲು ಭಾಗದ ಯುವಕರು ಮತ್ತು ಶಾಲಾ ಮಕ್ಕಳು ದಾರಿ ತಪ್ಪುತ್ತಿದ್ದಾರೆ. ಇದು ಯುವಕರನ್ನು ವಿಕೃತವಾಗಿ ವರ್ತಿಸುವಂತೆ ಮಾಡುತ್ತಿದ್ದು, ಇಂತಹ ಚಟುವಟಿಕೆಗಳಿಗೆ ತಕ್ಷಣವೇ ಬ್ರೇಕ್ ಹಾಕಬೇಕು ಎಂದು ಪ್ರತಿಭಟನಾಕಾರರು ಆಗ್ರಹಿಸಿದರು. ಅಡಿಷನಲ್ ಎಸ್ಪಿ ಕಾರ್ಯಪ್ಪ ನವರನ್ನು ಭೇಟಿ ಮಾಡಿದ ಸ್ಥಳೀಯ ಮುಖಂಡರು, ಅಕ್ರಮ ಚಟುವಟಿಕೆಗಳಿಗೆ ಕಡಿವಾಣ ಹಾಕುವಂತೆ ಶಿಸ್ತಿನ ಮನವಿ ಸಲ್ಲಿಸಿದರು.

ಮುಂಬತ್ತಿ ಮೆರವಣಿಗೆಯಲ್ಲಿ ಮಕ್ಕಳು ಭಾಗಿ

ಈ ಪ್ರತಿಭಟನೆಯಲ್ಲಿ ಕೇವಲ ಹಿರಿಯರಷ್ಟೇ ಅಲ್ಲದೆ, ಸಣ್ಣ ಮಕ್ಕಳು ಸಹ ಪಾಲ್ಗೊಂಡು ಮುಂಬತ್ತಿ ಹಿಡಿದು ಮೆರವಣಿಗೆ ನಡೆಸಿದ್ದು ವಿಶೇಷವಾಗಿತ್ತು. ಯಾವುದೇ ಸಮುದಾಯದವರಾಗಲಿ, ಕಾನೂನು ಬಾಹಿರ ಕೆಲಸ ಮಾಡಿದರೆ ಅವರ ವಿರುದ್ಧ ಕಠಿಣ ಕ್ರಮ ಜರುಗಿಸಬೇಕು ಎಂಬುದು ಇಡೀ ಸೂಳೆಬೈಲಿನ ಜನರ ಒಕ್ಕೊರಲ ದನಿಯಾಗಿದೆ. ಗಾಂಜಾ ಮುಕ್ತ ಬಡಾವಣೆಯನ್ನಾಗಿ ಮಾಡುವವರೆಗೆ ವಿಶ್ರಮಿಸುವುದಿಲ್ಲ ಎಂದು ಪ್ರತಿಭಟನಾಕಾರರು ಎಚ್ಚರಿಕೆ ನೀಡಿದ್ದಾರೆ.

Leave a Reply

Your email address will not be published. Required fields are marked *

Join WhatsApp Group
error: Content is protected !!