
ಪುತ್ತೂರು: ನಗರದ ಮಹಾವೀರ ಮೆಡಿಕಲ್ ಸೆಂಟರ್ ಆಸ್ಪತ್ರೆಯ ಕಂಪೌಂಡ್ ಗೋಡೆ ಒಡೆದು ರಸ್ತೆ ನಿರ್ಮಿಸಿ, ಜೆಸಿಬಿ ಹಾಗೂ ಟಿಪ್ಪರ್ ವಾಹನ ಸಂಚರಿಸುವ ಮೂಲಕ ಆಸ್ಪತ್ರೆಯೊಳಗಿನ ರೋಗಿಗಳು ಮತ್ತು ಸಿಬ್ಬಂದಿಗಳ ಆರೋಗ್ಯಕ್ಕೆ ತೊಂದರೆ ಉಂಟು ಮಾಡಲಾಗಿದೆ ಎಂದು ಆರೋಪಿಸಿ ಆಸ್ಪತ್ರೆಯ ಮಾಲಕ ಡಾ. ಅಶೋಕ್ ಪಡಿವಾಳ್ ಅವರು ಪುತ್ತೂರು ನಗರ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ.
ದೂರಿನ ಪ್ರಕಾರ, ಬೊಳುವಾರು ಕೀರ್ತನಾ ರೆಸಿಡೆನ್ಸಿಯ ಪ್ರದೀಪ್ ಹಾಗೂ ಕೀರ್ತಿನಾ ಡೆವಲಪರ್ಸ್‌ನ ಪ್ರತಾಪ್ ವರ್ಮ ಅವರು ಜೆಸಿಬಿ ಯಂತ್ರದ ಮೂಲಕ ಆಸ್ಪತ್ರೆಯ ಆವರಣ ಪ್ರವೇಶಿಸಿ ಕಂಪೌಂಡ್ ಗೋಡೆಯನ್ನು ಒಡೆದು ರಸ್ತೆ ನಿರ್ಮಿಸಿ ನಷ್ಟ ಉಂಟು ಮಾಡಿದ್ದಾರೆ ಎನ್ನಲಾಗಿದೆ.
ಇದೇ ವೇಳೆ, ನಿರ್ಮಿತ ರಸ್ತೆಯಲ್ಲೂ ಹಾಗೂ ಆಸ್ಪತ್ರೆಯ ಆವರಣದಲ್ಲೂ ಜೆಸಿಬಿ ಮತ್ತು ಟಿಪ್ಪರ್ ವಾಹನಗಳನ್ನು ಸಂಚರಿಸಿ ಕಸ, ಧೂಳು ಮತ್ತು ಅತಿಯಾದ ಸದ್ದು ಗಲಾಟೆ ಉಂಟು ಮಾಡಲಾಗಿದೆ. ಇದರಿಂದ ಚಿಕಿತ್ಸೆ ಪಡೆಯುತ್ತಿರುವ ಒಳರೋಗಿ, ಹೊರರೋಗಿಗಳು ಹಾಗೂ ಆಸ್ಪತ್ರೆಯ ಸಿಬ್ಬಂದಿಗಳ ಆರೋಗ್ಯಕ್ಕೆ ತೊಂದರೆ ಉಂಟಾಗಿದೆ ಎಂದು ದೂರಿನಲ್ಲಿ ವಿವರಿಸಲಾಗಿದೆ.
ಪುತ್ತೂರು ನಗರ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಮುಂದುವರಿಸಿದ್ದಾರೆ.







