
ದಕ್ಷಿಣ ಅಮೆರಿಕದ ಬೊಲಿವಿಯಾ ದೇಶದಲ್ಲಿ ಭೀಕರ ವಿಮಾನ ದುರಂತ (Plane crash) ಸಂಭವಿಸಿ ಕನಿಷ್ಠ 15 ಮಂದಿ ಸಾವನ್ನಪ್ಪಿರುವ ಘಟನೆ ನಡೆದಿದೆ. ಸೇನೆಯ ಸರಕು ಸಾಗಣೆ ವಿಮಾನವು ಹಾರಾಟ ಆರಂಭಿಸಿದ ಕೆಲವೇ ಕ್ಷಣಗಳ ಬಳಿಕ ನಿಯಂತ್ರಣ ತಪ್ಪಿ ನೆಲಕ್ಕುರುಳಿದ ಪರಿಣಾಮ ಈ ಅವಘಡ ಸಂಭವಿಸಿದೆ.
ವಿಮಾನದಲ್ಲಿ ಹೊಸದಾಗಿ ಮುದ್ರಿಸಲಾದ ಬ್ಯಾಂಕ್ ನೋಟುಗಳನ್ನು ಸಾಗಿಸಲಾಗುತ್ತಿತ್ತು ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಅಪಘಾತದ ಹೊತ್ತಿಗೆ ವಿಮಾನವು ಜನಸಂಚಾರ ಇರುವ ಪ್ರದೇಶದ ಮೇಲೆ ಬಿದ್ದು ಭಾರೀ ಸ್ಫೋಟ ಸಂಭವಿಸಿದೆ. ಪರಿಣಾಮವಾಗಿ ಸ್ಥಳದಲ್ಲೇ ಅನೇಕರು ಮೃತಪಟ್ಟಿದ್ದಾರೆ. ಕೇವಲ ವಿಮಾನದಲಿದ್ದವರು ಮಾತ್ರವಲ್ಲದೇ ಹೆದ್ದಾರಿಯಲ್ಲಿ ಕಾರ್ ಗಳಲ್ಲಿ ಸಂಚರಿಸುತ್ತಿದ್ದವರೂ ಸಹ ಅವಘಡದಲ್ಲಿ ಮೃತಪಟ್ಟಿದ್ದಾರೆ.
ದುರಂತದಲ್ಲಿ ಹಲವು ವಾಹನಗಳು ಹಾಗೂ ಸುತ್ತಮುತ್ತಲಿನ ಆಸ್ತಿಪಾಸ್ತಿಗಳಿಗೆ ಹಾನಿಯಾಗಿದೆ. ಗಾಯಗೊಂಡವರನ್ನು ಸಮೀಪದ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಕೆಲವರ ಸ್ಥಿತಿ ಗಂಭೀರವಾಗಿದೆ ಎಂದು ತಿಳಿದುಬಂದಿದೆ.
ರಾಜಧಾನಿ ಲಾ ಪಾಸ್ (La Paz) ಸಮೀಪ ಈ ಘಟನೆ ಸಂಭವಿಸಿದ್ದು, ತುರ್ತು ರಕ್ಷಣಾ ತಂಡಗಳು ತಕ್ಷಣ ಸ್ಥಳಕ್ಕೆ ಧಾವಿಸಿ ಶೋಧ ಹಾಗೂ ರಕ್ಷಣಾ ಕಾರ್ಯಾಚರಣೆ ಕೈಗೊಂಡಿವೆ. ವಿಮಾನ ದುರಂತಕ್ಕೆ ಕಾರಣವೇನು ಎಂಬುದರ ಕುರಿತು ತನಿಖೆ ಆರಂಭಿಸಲಾಗಿದೆ. ತಾಂತ್ರಿಕ ದೋಷವೇ ಅಥವಾ ಇತರ ಕಾರಣಗಳೇ ಎಂಬುದನ್ನು ಅಧಿಕಾರಿಗಳು ಪರಿಶೀಲಿಸುತ್ತಿದ್ದಾರೆ.







