
ಕಾರ್ಕಳ, ಮಾ. 1: ಕುಂದಾಪುರ ಕಂಡೂರು ಗ್ರಾಮಾಂತರ ಪೊಲೀಸ್ ಠಾಣೆಯ ಕಾನೂನು ಮತ್ತು ಸುವ್ಯವಸ್ಥೆ ವಿಭಾಗದ ಉಪನಿರೀಕ್ಷಕ (ಎಸ್‌ಐ) ನಾಸೀರ್ ಹುಸೇನ್ (58) ಅವರು ಹೃದಯಾಘಾತದಿಂದ ಶನಿವಾರ ನಿಧನ ಹೊಂದಿದರು.
ಜಿಲ್ಲಾ ಪೊಲೀಸ್ ಇಲಾಖೆ ವತಿಯಿಂದ ಉಡುಪಿ ಅಜ್ಜರಕಾಡು ಮೈದಾನದಲ್ಲಿ ಆಯೋಜಿಸಲಾಗಿದ್ದ ‘ನಮ್ಮ ಪೊಲೀಸ್ – ನಮ್ಮ ಹೆಮ್ಮೆ’ ಹಾಗೂ ಸೈಬರ್ ಜಾಗೃತಿ ಅಭಿಯಾನದ ಅಂಗವಾಗಿ ನಡೆದ 5 ಕಿ.ಮೀ. ಮ್ಯಾರಥಾನ್ ಓಟದಲ್ಲಿ ಪಾಲ್ಗೊಂಡಿದ್ದ ವೇಳೆ ಅವರು ಅಸ್ವಸ್ಥಗೊಂಡು ಕುಸಿದು ಬಿದ್ದರು. ತಕ್ಷಣ ಅವರನ್ನು ಉಡುಪಿಯ ಖಾಸಗಿ ಆಸ್ಪತ್ರೆಗೆ ಕರೆದೊಯ್ಯಲಾಯಿತಾದರೂ, ವೈದ್ಯರು ಪರಿಶೀಲಿಸಿ ಮೃತಪಟ್ಟಿರುವುದಾಗಿ ಘೋಷಿಸಿದರು.
ಮೂಲತಃ ಚಿಕ್ಕಮಗಳೂರು ಜಿಲ್ಲೆಯ ಆಲ್ಲೂರು ಗ್ರಾಮದವರಾದ ನಾಸೀರ್ ಹುಸೇನ್ ಅವರು ಉಡುಪಿ ಜಿಲ್ಲೆಯ ಅಮಾಸೆಬೈಲು, ಕುಂದಾಪುರ ನಗರ, ಕುಂದಾಪುರ ಸಂಚಾರ ಠಾಣೆ, ಶಂಕರನಾರಾಯಣ, ಕಾರ್ಕಳ ಗ್ರಾಮಾಂತರ ಸೇರಿದಂತೆ ವಿವಿಧ ಠಾಣೆಗಳಲ್ಲಿ ಪಿಎಸ್‌ಐ ಆಗಿ ಕರ್ತವ್ಯ ನಿರ್ವಹಿಸಿದ್ದರು. ಪ್ರಸ್ತುತ ಕಂಡೂರು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಉಪನಿರೀಕ್ಷಕರಾಗಿ ಸೇವೆ ಸಲ್ಲಿಸುತ್ತಿದ್ದರು.







