ಪುತ್ತೂರು, ಮಾ.6: ಮುಕ್ವೆ ಜಂಕ್ಷನ್ ಸಮೀಪ ತಲವಾರು ಪ್ರದರ್ಶಿಸಿದ ಆರೋಪ ಹಾಗೂ ಬಳಿಕ ನಡೆದ ಹಲ್ಲೆ ಸಂಬಂಧ ಪುತ್ತೂರು ನಗರ ಪೊಲೀಸ್ ಠಾಣೆಯಲ್ಲಿ ಇಬ್ಬರ ವಿರುದ್ಧ ಪ್ರತ್ಯೇಕ ಪ್ರಕರಣಗಳು ದಾಖಲಾಗಿವೆ.
ನರಿಮೊಗರು ನಿವಾಸಿ ಮಹಮ್ಮದ್ ಸಿರಾಜುದ್ದೀನ್ (36) ಅವರ ದೂರಿನಂತೆ, ಮಾ.6ರ ರಾತ್ರಿ ಮುಕ್ವೆ ಮಸೀದಿ ಬಳಿ ಇದ್ದ ವೇಳೆ ನರಿಮೊಗರು ನಿವಾಸಿ ಅಬ್ದುಲ್ ರಹಿಮಾನ್ ಅವರು ಅದೇ ದಿನ ಸಂಜೆ ನಡೆದ ಗಲಾಟೆ ವಿಚಾರವಾಗಿ ತಕರಾರು ತೆಗೆದು ತೆರಳಿದ್ದರೆನ್ನಲಾಗಿದೆ. ಬಳಿಕ ಸಿರಾಜುದ್ದೀನ್ ಮನೆಗೆ ತೆರಳುವ ಸಂದರ್ಭದಲ್ಲಿ ಮುಕ್ವೆ ಬಳಿ ಅಬ್ದುಲ್ ರಹಿಮಾನ್ ಅವರು ಕೈಯಲ್ಲಿ ತಲವಾರು ಹಿಡಿದು ಸಾರ್ವಜನಿಕರಲ್ಲಿ ಭೀತಿ ಉಂಟುಮಾಡುವಂತೆ ಪ್ರದರ್ಶಿಸುತ್ತಿರುವುದು ಕಂಡುಬಂದಿತೆಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.
ಈ ದೂರಿನ ಮೇರೆಗೆ ಪುತ್ತೂರು ನಗರ ಪೊಲೀಸ್ ಠಾಣೆಯಲ್ಲಿ ಕ್ರೈಂ ನಂ. 29/2026ರಲ್ಲಿ ಭಾರತೀಯ ನ್ಯಾಯ ಸಂಹಿತೆ (BNS) 2023ರ ಕಲಂ 109, 351 ಹಾಗೂ ಶಸ್ತ್ರಾಸ್ತ್ರ ಕಾಯ್ದೆ 1959ರ ಕಲಂ 3, 25, 27ರಡಿ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ.
ಇದರಿಂದ ಸ್ಥಳದಲ್ಲಿದ್ದ ಕೆಲ ಸ್ಥಳೀಯರು ಅಬ್ದುಲ್ ರಹಿಮಾನ್ ಅವರ ಮೇಲೆ ಹಲ್ಲೆ ನಡೆಸಿದ ಪರಿಣಾಮ ಅವರು ಗಂಭೀರವಾಗಿ ಗಾಯಗೊಂಡಿದ್ದು, ಮಂಗಳೂರಿನ ವೆನ್‌ಲಾಕ್ ಆಸ್ಪತ್ರೆಯಲ್ಲಿ ಒಳರೋಗಿಯಾಗಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಪ್ರಾಣಾಪಾಯದಿಂದ ಪಾರಾಗಿರುವುದಾಗಿ ತಿಳಿದುಬಂದಿದೆ.
ಇನ್ನೊಂದೆಡೆ, ಅಬ್ದುಲ್ ರಹಿಮಾನ್ ಅವರ ಪ್ರತಿ ದೂರಿನ ಮೇರೆಗೆ, ತಾವು ಮುಕ್ವೆ ಜಂಕ್ಷನ್ ಬಳಿ ನಿಂತಿದ್ದಾಗ ಅಪರಿಚಿತರು ಹಿಂದಿನಿಂದ ದಾಳಿ ನಡೆಸಿ ಪ್ರಜ್ಞೆ ತಪ್ಪುವಂತೆ ಹಲ್ಲೆ ಮಾಡಿದ್ದಾರೆಂದು ಹೇಳಲಾಗಿದೆ. ಈ ಸಂಬಂಧ ಕ್ರೈಂ ನಂ. 30/2026ರಲ್ಲಿ BNS 2023ರ ಕಲಂ 118(1), 126(2) ಜೊತೆಗೆ 3(5)ರಡಿ ಪ್ರಕರಣ ದಾಖಲಾಗಿದೆ.
ಎರಡೂ ಪ್ರಕರಣಗಳ ಕುರಿತು ಪೊಲೀಸರು ತನಿಖೆ ಮುಂದುವರಿಸಿದ್ದಾರೆ.

Leave a Reply

Your email address will not be published. Required fields are marked *

Join WhatsApp Group
error: Content is protected !!