ಪೊಲೀಸ್ ಠಾಣೆಗೆ ಕೌಟುಂಬಿಕ ಕಲಹದ ಹಿನ್ನೆಲೆಯಲ್ಲಿ ದೂರು ಕೊಡಲು ಬಂದ ಮಹಿಳೆಯರನ್ನು ಮಂಚಕ್ಕೆ ಕರೆಯುತ್ತಾರೆ ಎಂಬ ಆರೋಪದ ಹಿನ್ನೆಲೆಯಲ್ಲಿ ಮೂಡುಬಿದಿರೆ ಪೊಲೀಸ್ ಇನ್ಸ್‌ಪೆಕ್ಟರ್ ಸಂದೇಶ್ ಪಿ.ಜಿ. ಅವರನ್ನು ತಕ್ಷಣದಿಂದ ಜಾರಿಗೆ ಬರುವಂತೆ ಅಮಾನತುಗೊಳಿಸಿ ಮಂಗಳೂರು ನಗರ ಪೊಲೀಸ್ ಆಯುಕ್ತರಾದ ಸುಧೀರ್ ಕುಮಾರ್ ರೆಡ್ಡಿ ಆದೇಶ ಹೊರಡಿಸಿದ್ದಾರೆ.

ಅಮಾನತಿಗೆ ಕಾರಣವೇನು?

ಇನ್ಸ್‌ಪೆಕ್ಟರ್ ಸಂದೇಶ್ ವಿರುದ್ಧ ಕೇಳಿಬಂದ ಲೈಂಗಿಕ ಕಿರುಕುಳ ಮತ್ತು ಭ್ರಷ್ಟಾಚಾರದ ಆರೋಪಗಳ ಬಗ್ಗೆ ಎಸಿಪಿ (ACP) ನೀಡಿದ ಪ್ರಾಥಮಿಕ ತನಿಖಾ ವರದಿಯ ಆಧಾರದ ಮೇಲೆ ಈ ಕ್ರಮ ಕೈಗೊಳ್ಳಲಾಗಿದೆ. ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದ ವಿಡಿಯೋ ಮತ್ತು ಆಡಿಯೋ ತುಣುಕುಗಳಲ್ಲಿ ಇನ್ಸ್‌ಪೆಕ್ಟರ್ ಅವರ ವರ್ತನೆ ಅತ್ಯಂತ ಅನುಮಾನಾಸ್ಪದವಾಗಿತ್ತು. ವಿಶೇಷವಾಗಿ ಫೋನ್‌ನಲ್ಲಿ ಮಹಿಳೆಯೊಬ್ಬರ ಜೊತೆ ಅವರು ನಡೆಸಿದ ಅಸಭ್ಯ ಸಂಭಾಷಣೆಯು ಪೊಲೀಸ್ ಇಲಾಖೆಯ ಘನತೆಗೆ ಕುಂದು ತಂದಿದೆ ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ.

ದೂರುದಾರರ ಹಿನ್ನೆಲೆ ಮತ್ತು ಕಮಿಷನರ್ ಸ್ಪಷ್ಟನೆ:

ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಮಂಗಳೂರು ಕಮಿಷನರ್ ಸುಧೀರ್ ರೆಡ್ಡಿ ಅವರು ಸುದೀರ್ಘ ಪತ್ರಿಕಾ ಹೇಳಿಕೆ ನೀಡಿದ್ದಾರೆ. ಮಾಧ್ಯಮಗಳ ಮುಂದೆ ಇನ್ಸ್‌ಪೆಕ್ಟರ್ ವಿರುದ್ಧ ಗಂಭೀರ ಆರೋಪ ಮಾಡಿದ್ದ ಸುಮತಿ ನಾಯಕ್ ಮತ್ತು ಅವಿತಾ ಮಿನಾಜೆಸ್ ಅವರ ಪ್ರಕರಣಗಳ ಬಗ್ಗೆಯೂ ಅವರು ಮಾಹಿತಿ ಹಂಚಿಕೊಂಡಿದ್ದಾರೆ. ಸುಮತಿ ನಾಯಕ್ ಮತ್ತು ಅವರ ಸಹೋದರಿಯ ನಡುವೆ ಕೌಟುಂಬಿಕ ಕಲಹಗಳಿದ್ದು, ಇಬ್ಬರ ವಿರುದ್ಧವೂ ತಲಾ ಎರಡು ಪ್ರಕರಣಗಳು ದಾಖಲಾಗಿವೆ. ಇನ್ಸ್‌ಪೆಕ್ಟರ್ ವಿರುದ್ಧವೂ ಇವರು ದೂರು ನೀಡಿದ್ದು, ಪ್ರಸ್ತುತ ಪ್ರಕರಣಗಳು ಹೈಕೋರ್ಟ್‌ನಲ್ಲಿ ತಡೆಯಾಜ್ಞೆ (Stay) ಪಡೆದುಕೊಂಡಿವೆ.

ಅವಿತಾ ಮಿನಾಜೆಸ್ ಪ್ರಕರಣ:

ಇನ್ಸ್‌ಪೆಕ್ಟರ್ ವಿರುದ್ಧ ಲಂಚ ಮತ್ತು ಕಿರುಕುಳದ ಆರೋಪ ಮಾಡಿದ್ದ ಅವಿತಾ ಅವರ ಪತಿಯ ವಿರುದ್ಧ ನಾಲ್ಕು ಪ್ರಕರಣಗಳಿವೆ. ಬಡವರ ಕಿಡ್ನಿ ಚಿಕಿತ್ಸೆಗಾಗಿ ಸಂಗ್ರಹಿಸಿದ ಹಣ ದುರುಪಯೋಗಪಡಿಸಿಕೊಂಡ ಆರೋಪದಲ್ಲಿ ಅವಿತಾ ಕೂಡ ಆರೋಪಿಯಾಗಿದ್ದಾರೆ. ಇನ್ಸ್‌ಪೆಕ್ಟರ್ ಕಿರುಕುಳ ನೀಡಿದ್ದಾರೆ ಎನ್ನಲಾದ ಸಮಯದಲ್ಲಿ ಅಲ್ಲಿ ಸಿಸಿಟಿವಿ ಇತ್ತು ಹಾಗೂ ಇಬ್ಬರು ಮಾಧ್ಯಮ ಪ್ರತಿನಿಧಿಗಳು ಮತ್ತು ಒಬ್ಬ ವಕೀಲರು ಇದ್ದರು. ಅವರು ಕಿರುಕುಳ ನಡೆದಿಲ್ಲ ಎಂದು ಸಾಕ್ಷ್ಯ ನೀಡಿದ್ದಾರೆ.

ವೈರಲ್ ವಿಡಿಯೋವೇ ಮುಳುವಾಯ್ತು:

ಆದರೆ, ಕಮಿಷನರ್ ಅವರ ಪ್ರಕಾರ, ಮಾಧ್ಯಮಗಳಲ್ಲಿ ಹೇಳಿಕೆ ನೀಡಿದ ಮಹಿಳೆಯರಿಗಿಂತ ವಿಭಿನ್ನವಾಗಿರುವ ಮತ್ತಿಬ್ಬರು ಮಹಿಳೆಯರು ವೈರಲ್ ಆಡಿಯೋ ಮತ್ತು ವಿಡಿಯೋದಲ್ಲಿದ್ದಾರೆ. ಆ ಇಬ್ಬರು ಮಹಿಳೆಯರು ದೂರು ನೀಡಲು ನಿರಾಕರಿಸಿದ್ದರೂ, ಆಡಿಯೋದಲ್ಲಿ ಇನ್ಸ್‌ಪೆಕ್ಟರ್ ಸಂದೇಶ್ ಅವರು ಮಹಿಳೆಯರ ಜೊತೆ ನಡೆಸಿರುವ ಅಸಭ್ಯ ಮಾತುಕತೆ ಮತ್ತು ಅವರ ದುರ್ವರ್ತನೆ ಮೇಲ್ನೋಟಕ್ಕೆ ಸಾಬೀತಾಗಿದೆ. ಈ ಹಿನ್ನೆಲೆಯಲ್ಲಿ ಶಿಸ್ತು ಕ್ರಮವಾಗಿ ಅವರನ್ನು ಅಮಾನತು ಮಾಡಲಾಗಿದೆ.

ಮುಂದಿನ ತನಿಖೆ: ಪೊಲೀಸ್ ಇಲಾಖೆಯಲ್ಲಿ ಮಹಿಳೆಯರ ಘನತೆಗೆ ಚ್ಯುತಿ ತರುವ ಕೆಲಸ ಯಾರೇ ಮಾಡಿದರೂ ಸಹಿಸುವುದಿಲ್ಲ ಎಂದು ಕಮಿಷನರ್ ಕಟ್ಟುನಿಟ್ಟಿನ ಎಚ್ಚರಿಕೆ ನೀಡಿದ್ದಾರೆ. ಸದ್ಯ ಅಮಾನತುಗೊಂಡಿರುವ ಸಂದೇಶ್ ವಿರುದ್ಧ ಇಲಾಖಾ ಮಟ್ಟದ ವಿವರವಾದ ತನಿಖೆ ಮುಂದುವರಿಯಲಿದ್ದು, ಸಂತ್ರಸ್ತೆಯರು ಮುಂದೆ ಬಂದು ದೂರು ನೀಡಲು ಇಲಾಖೆ ಮುಕ್ತ ಅವಕಾಶ ನೀಡಿದೆ

Leave a Reply

Your email address will not be published. Required fields are marked *

Join WhatsApp Group
error: Content is protected !!