ಸುಳ್ಯ, ಮಾ.18: ಸುಬ್ರಹ್ಮಣ್ಯ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಕಳೆದ ವರ್ಷ ನಡೆದ ಹಾಲಿನ ಡೈರಿ ಮತ್ತು ದಿನಸಿ ಅಂಗಡಿ ಕಳವು ಪ್ರಕರಣದಲ್ಲಿ ಆರೋಪಿಗೆ ಸುಳ್ಯ ನ್ಯಾಯಾಲಯ ಶಿಕ್ಷೆ ವಿಧಿಸಿದೆ.
ದಿನಾಂಕ 17/08/2025 ರಂದು ನಡೆದಿದ್ದ ಈ ಕಳವು ಪ್ರಕರಣ (ಅ.ಕ್ರಂ. 44/2025, ಕಲಂ 331(4), 305 ಭಾರತೀಯ ನ್ಯಾಯ ಸಂಹಿತೆ–2023) ಸಂಬಂಧಿಸಿ ಮಾ.18 ರಂದು ಮಾನ್ಯ ನ್ಯಾಯಾಲಯದಲ್ಲಿ ವಿಚಾರಣೆ ನಡೆಯಿತು. ನ್ಯಾಯಾಧೀಶ ಶಿವಣ್ಣ ಹೆಚ್.ಆರ್. ಅವರು ಆರೋಪಿತ ಕೇರಳ ಮೂಲದ ಸತೀಶ್ (45) ಅವರಿಗೆ ಕಲಂ 331(4) ಅಡಿಯಲ್ಲಿ 6 ತಿಂಗಳ ಸಾಧಾರಣ ಕಾರಾಗೃಹ ಶಿಕ್ಷೆ ಹಾಗೂ ₹500 ದಂಡ, ಕಲಂ 305 ಅಡಿಯಲ್ಲಿ 7 ತಿಂಗಳ ಸಾಧಾರಣ ಕಾರಾಗೃಹ ಶಿಕ್ಷೆ ಹಾಗೂ ₹500 ದಂಡ ವಿಧಿಸಿ ತೀರ್ಪು ನೀಡಿದ್ದಾರೆ. ದಂಡ ಪಾವತಿಸದಿದ್ದಲ್ಲಿ 10 ದಿನಗಳ ಹೆಚ್ಚುವರಿ ಕಾರಾಗೃಹ ಶಿಕ್ಷೆ ಅನುಭವಿಸಬೇಕೆಂದು ಆದೇಶಿಸಲಾಗಿದೆ.
ಪ್ರಕರಣದ ತನಿಖೆಯನ್ನು ಪಿ.ಎಸ್.ಐ. ಕಾರ್ತಿಕ್ ನಡೆಸಿ, ಅಗತ್ಯ ಸಾಕ್ಷ್ಯಾಧಾರಗಳನ್ನು ಸಂಗ್ರಹಿಸಿ ನ್ಯಾಯಾಲಯಕ್ಕೆ ದೋಷಾರೋಪಣಾ ಪಟ್ಟಿ ಸಲ್ಲಿಸಿದ್ದರು. ಸಹಾಯಕ ಸರ್ಕಾರಿ ಅಭಿಯೋಜಕಿ ಪ್ರೀತಿ ಅವರು ಸರ್ಕಾರದ ಪರವಾಗಿ ಸಮರ್ಥ ವಾದ ಮಂಡಿಸಿದ್ದರು.














