ಮಂಗಳೂರು, ಮಾ.18: ಕಸಬಾ ಬೆಂಗ್ರೆ ಗ್ರಾಮದ ಫಲ್ಗುಣಿ ನದಿ ದಡದ ಶೆಡ್‌ನಲ್ಲಿ ಅಕ್ರಮವಾಗಿ ಜಾನುವಾರು ವಧೆ ನಡೆಸಲಾಗುತ್ತಿದೆ ಎಂಬ ಮಾಹಿತಿ ಮೇರೆಗೆ ಪಣಂಬೂರು ಪೊಲೀಸರು ದಾಳಿ ನಡೆಸಿ 9 ಜಾನುವಾರುಗಳನ್ನು ರಕ್ಷಿಸಿದ್ದು, 205 ಕೆಜಿ ಮಾಂಸ ಮತ್ತು ಪರಿಕರಗಳನ್ನು ವಶಪಡಿಸಿಕೊಂಡಿದ್ದಾರೆ.
ಬೆಳಗ್ಗೆ 9.15ರ ಸುಮಾರಿಗೆ ಬದ್ರಿಯಾ ಜುಮ್ಮಾ ಮಸೀದಿ ಸಮೀಪ ಅಹಮ್ಮದ್ ಎಂಬವರ ಮನೆಯ ಹಿಂಭಾಗದ ಶೆಡ್‌ನಲ್ಲಿ 4-5 ಮಂದಿ ಜಾನುವಾರುಗಳನ್ನು ಅಕ್ರಮವಾಗಿ ವಧೆ ಮಾಡುತ್ತಿರುವ ಮಾಹಿತಿ ಲಭಿಸಿತು. ಎಸಿಪಿ ಶ್ರೀಕಾಂತ್ ಹಾಗೂ ಪಿಐ ಸಲೀಂ ಅಬ್ಬಾಸ್ ಮಾರ್ಗದರ್ಶನದಲ್ಲಿ ಪಣಂಬೂರು ಠಾಣೆಯ ಪಿಎಸ್ಐ ಶ್ರೀಮತಿ ಶ್ರೀಕಲಾ ಮತ್ತು ಸಿಬ್ಬಂದಿ ದಾಳಿ ನಡೆಸಿದರು.
ದಾಳಿಯಲ್ಲಿ ವಧೆಗೆ ಕಟ್ಟಿ ಹಾಕಿದ್ದ 9 ಜಾನುವಾರುಗಳನ್ನು ರಕ್ಷಿಸಿ, ಈಗಾಗಲೇ ವಧೆ ಮಾಡಿ ಮಾರಾಟಕ್ಕೆ ಸಂಗ್ರಹಿಸಿದ್ದ 205 ಕೆಜಿ ಮಾಂಸ ಹಾಗೂ ವಧೆ ಉಪಕರಣಗಳನ್ನು ವಶಪಡಿಸಿಕೊಳ್ಳಲಾಗಿದೆ.
ಕೃತ್ಯದಲ್ಲಿ ಭಾಗಿಯಾಗಿದ್ದ ಕಸಬಾ ಬೆಂಗ್ರೆಯ ಕಬೀರ್ ಅಲಿಯಾಸ್ ಪೆತ್ತ ಕಬೀರ್, ಜೋಕಟ್ಟೆಯ ಬದ್ರು ಅಲಿಯಾಸ್ ಬದ್ರುದ್ದೀನ್ ಸೇರಿದಂತೆ ಮೂವರು ಆರೋಪಿಗಳು ಸ್ಥಳದಿಂದ ಪರಾರಿಯಾಗಿದ್ದಾರೆ. ಆರೋಪಿಗಳ ಪತ್ತೆಗೆ ವಿಶೇಷ ತಂಡ ರಚಿಸಲಾಗಿದ್ದು, ಶೀಘ್ರದಲ್ಲೇ ಬಂಧಿಸುವುದಾಗಿ ಪೊಲೀಸರು ತಿಳಿಸಿದ್ದಾರೆ.
ಈ ಸಂಬಂಧ ಪಣಂಬೂರು ಪೊಲೀಸ್ ಠಾಣೆಯಲ್ಲಿ ಅ.ಕ್ರ. 42/2026 ಅಡಿಯಲ್ಲಿ ಭಾರತೀಯ ನ್ಯಾಯ ಸಂಹಿತೆ 303(2), ಕರ್ನಾಟಕ ಜಾನುವಾರು ವಧೆ ನಿಷೇಧ ಮತ್ತು ಸಂರಕ್ಷಣಾ ಕಾಯ್ದೆ–2020ರ ಕಲಂ 4, 7, 12 ಹಾಗೂ ಪ್ರಾಣಿ ಕ್ರೌರ್ಯ ನಿಷೇಧ ಕಾಯ್ದೆಯ ಕಲಂ 11ರಡಿ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರಿದಿದೆ.













